ಯುವತಿಗೆ ನಗ್ನ‌ಚಿತ್ರ ಕಳುಹಿಸುವಂತೆ ಒತ್ತಾಯಿಸಿದ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು




ಕುಲು: 20 ವರ್ಷದ ಯುವತಿಗೆ ಚಾಟಿಂಗ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಲ್ಲದೇ, ಆಕೆಯ ನಗ್ನಚಿತ್ರಕ್ಕೆ ಒತ್ತಾಯಿಸಿದ್ದ ಎಂದು ಆರೋಪಿಸಿ ಬಿಜೆಪಿ ಶಾಸಕ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಯ ಮಾಜಿ ಉಪಸ್ಪೀಕರ್ ಹನ್ಸ್‌ರಾಜ್ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.


ಐಪಿಸಿ ಸೆಕ್ಷನ್ 75 (ಲೈಂಗಿಕತೆ ಒತ್ತಾಯಿಸುವುದು, ಅಶ್ಲೀಲತೆ ಪ್ರದರ್ಶನ ಅಥವಾ ಲೈಂಗಿಕ ಲೇಪನದ ಪ್ರತಿಕ್ರಿಯೆ) ಮತ್ತು 351(2) (ಅಪರಾಧ ಪಿತೂರಿ) ಅನ್ವಯ ಶಾಸಕರ ಮೇಲೆ ಚಂಬಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಕಾರ್ಯಕರ್ತರೊಬ್ಬರ ಪುತ್ರಿ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.


ಆಗಸ್ಟ್ 9ರಂದೇ ಪ್ರಕರಣ ದಾಖಲಾಗಿದ್ದರೂ, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. "ಪುತ್ರಿಯೊಂದಿಗೆ ಆನ್ಲೈನ್ ಚಾಟಿಂಗ್ ವೇಳೆ ಆಕೆಯ ನಗ್ನಚಿತ್ರಕ್ಕೆ ಒತ್ತಾಯಿಸಿದ್ದಲ್ಲದೇ ಅಶ್ಲೀಲ ಸಂದೇಶಗಳನ್ನೂ ಹನ್ಸ್‌ರಾಜ್ ಕಳುಹಿಸಿದ್ದಾನೆ" ಎಂದು ಬಿಜೆಪಿ ಪದಾಧಿಕಾರಿಯೂ ಆಗಿರುವ ಸಂತ್ರಸ್ತೆಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ.


ಬಾಕಿ ಇರುವ ಕೆಲ ಕೆಲಸಗಳ ಬಗ್ಗೆ ಕೇಳಿದಾಗಲೆಲ್ಲ ಶಾಸಕ ವೈಯಕ್ತಿಕವಾಗಿ ಭೇಟಿ ಮಾಡುವಂತೆ ಒತ್ತಾಯಿಸುತ್ತಿದ್ದ ಹಾಗೂ ಏನು ಬೇಕೋ ಅದೆಲ್ಲವನ್ನೂ ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದ. ಶಾಸಕ ಹಾಗೂ ಶಾಸಕನ ಬೆಂಬಲಿಗರು ಈ ಚಾಟ್ಗಳನ್ನು ಡಿಲೀಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆ ಎಂದೂ ಮಹಿಳೆ ಆಪಾದಿಸಿದ್ದಾರೆ.