ಬೆಂಗಳೂರು: ತಮ್ಮ ಸ್ಕೂಲ್ ಫ್ರೆಂಡ್ಸ್‌ಗಳೇ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಸಿಡೇದಹಳ್ಳಿಯಲ್ಲಿ ನಡೆದಿದೆ.
ಮಮತಾ(31) ನೇಣಿಗೆ ಶರಣಾದ ಗೃಹಿಣಿ.
ಮಮತಾ ಅವರ ಶಾಲಾ ಸಹಪಾಠಿಗಳಾದ ವಡ್ಡರಹಳ್ಳಿಯ ನಿವಾಸಿ ಅಶೋಕ್ ಹಾಗೂ ಜೆ.ಪಿ.ನಗರದ ಗಣೇಶ್ ಎಂಬಿಬ್ಬರು ಅಶ್ಲೀಲ ಸಂದೇಶ ಕಳಿಸಿ "ನಮ್ಮೊಂದಿಗೆ ಸಹಕರಿಸು ಬಾ.. ಜೊತೆಗೆ ನೈಟ್ ಔಟ್ ಬಾ" ಎಂದು ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
'ಇಲ್ಲದಿದ್ದಲ್ಲಿ ನಿನ್ನನ್ನು ಬಿಡುವುದಿಲ್ಲ, ನಿನ್ನ ಸಂಸಾರ ಹಾಳು ಮಾಡುತ್ತೇವೆಂದು' ಬೆದರಿಕೆ ಒಡ್ಡಿದ್ದರಂತೆ. ಇದರಿಂದ ಮನನೊಂದು ಗೃಹಿಣಿ ಮಮತಾ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಮತಾ ಅವರ ಪತಿ ಲೋಕೇಶ್, ಪತ್ನಿಗೆ ಫೋನ್ ಕರೆ ಮಾಡಿದರೂ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಮನೆ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಅಶೋಕ್ ಮತ್ತು ಗಣೇಶ್ ವಿರುದ್ಧ ಲೋಕೇಶ್ ಠಾಣೆಗೆ ದೂರು ನೀಡಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಮೃತ ಮಮತಾ ಹಾಗೂ ಲೋಕೇಶ್ 3 ವರ್ಷಗಳ ಹಿಂದೆ ಪ್ರೀತಿಸಿ, ಮನೆಯವರ ಒಪ್ಪಿಗೆ ಮೇರೆಗೆ ದೊಡ್ಡಬಳ್ಳಾಪುರದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಎಲ್ಲವೂ ಚೆನ್ನಾಗಿದೆ ಅಂದುಕೊಳ್ಳುವಷ್ಟರಲ್ಲಿ, ಈ ದುರ್ಘಟನೆ ನಡೆದು ಹೋಗಿದೆ.

Social Icons