BANTWAL: ಗಣೇಶೋತ್ಸವ ಸಂದರ್ಭ ತಂಪು ಪಾನೀಯ, ಸಿಹಿ ವಿತರಣೆಗೆ ತಕರಾರು - ವೈರಲ್ ಆಯಿತು ಮಸೀದಿಗೆ ಬರೆದ ಪತ್ರ

 

ಬಂಟ್ವಾಳ: ಗಣೇಶೋತ್ಸವ ಶೋಭಾಯಾತ್ರೆ ಸಂದರ್ಭ ಮುಸ್ಲಿಮರು ಸಿಹಿತಿಂಡಿ ಹಂಚುವುದು, ತಂಪು ಪಾನೀಯ ವಿತರಿಸುವ ಪರಿಪಾಠ ಕೆಲಕಡೆಗಳಲ್ಲಿ ಉಂಟು. ಇದರಿಂದ ಕೋಮುಸೂಕ್ಷ್ಮವೆಂದೇ ಹೇಳಲಾಗುವ ಕರಾವಳಿಯ ಭಾಗಗಳಲ್ಲಿ ಬಿಸಿ ತಣ್ಣಗಾಗಿ ಸೌಹಾರ್ದ ಸನ್ನಿವೇಶ ಉಂಟಾಗುತ್ತದೆ ಎಂಬ ಮಾತಿದೆ. ಇದಕ್ಕೆ ಪೂರಕವಾಗಿ ಈ ವರ್ಷ ಗಣೇಶೋತ್ಸವ ಮೆರವಣಿಗೆ ಬಂಟ್ವಾಳ ತಾಲೂಕಿನ ಹಲವೆಡೆ ಸಾಂಗವಾಗಿ ನಡೆದಿದೆ. ಅದರಲ್ಲೂ ಮಾಣಿಯ ಕೊಡಾಜೆ, ಸಾಲೆತ್ತೂರುಗಳಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ತಂಪು ಪಾನೀಯ, ಐಸ್ ಕ್ರೀಮ್ ವಿತರಿಸಿದ್ದು, ಸುದ್ದಿಯಾಗಿತ್ತು. ಹಾಗೆಯೇ ಬೋಳಂತೂರಿನಲ್ಲಿ ಮೊನ್ನೆ ಗಣೇಶೋತ್ಸವ ಮೆರವಣಿಗೆ ನಿರ್ವಿಘ್ನವಾಗಿಯೇ ನಡೆದಿತ್ತು. ಆದರೆ ಅದಕ್ಕೂ ಮುನ್ನ ಬೋಳಂತೂರಿನ ಸಮಿತಿಯವರು ಮಸೀದಿ ಕಮಿಟಿಗೆ ಬರೆದಿದ್ದಾರೆ ಎನ್ನಲಾದ ಪತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. 

ಬಂಟ್ವಾಳ ತಾಲೂಕಿನ ಬೋಳಂತೂರು ತುಳಸೀವನ ಶ್ರೀ ಸಿದ್ಧಿ ವಿನಾಯಕ ವಿಶ್ವಸ್ಥ ಮಂಡಳಿಯ ವತಿಯಿಂದ ನಡೆದ ಶ್ರೀ ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಸಿಹಿತಿಂಡಿ ನೀಡದಂತೆ ಮಂಡಳಿಯಿಂದ ಮಸೀದಿಗೆ ನೀಡಿದ ಪತ್ರವೊಂದು ಇದೀಗ ಚರ್ಚೆಗೆ ಕಾರಣವಾಗಿದ್ದು, ಪರ- ವಿರೋಧದ ಮಾತುಗಳು ಕೇಳಿ ಬರುತ್ತಿದೆ.

ಕಳೆದ ವರ್ಷ ಮೆರವಣಿಗೆಯ ಸಂದರ್ಭ ತಮ್ಮ ಸಮಾಜ ಬಾಂಧವರು ಪಾನೀಯ ಹಾಗೂ ಸಿಹಿತಿಂಡಿ ವಿತರಿಸಿದ್ದು, ಇದರಿಂದ ನಮ್ಮ ಕೆಲವು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಇದರಿಂದ ಸಮಾಜದ ಸಾಮರಸ್ಯ ಕೆಡುವ ಆತಂಕವೂ ಇದೆ. ಹೀಗಾಗಿ ಇನ್ನು ಮುಂದೆ ಶೋಭಾಯಾತ್ರೆ ಸಂದರ್ಭದಲ್ಲಿ ಪಾನೀಯ, ಸಿಹಿತಿಂಡಿ ನೀಡದಂತೆ ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಮುಸಲ್ಮಾನ ಸಮಾಜ ಬಾಂಧವರು ನೀಡಿದ ಸಿಹಿ ತಿಂಡಿ ತಿಂದು ನಮ್ಮ ಮಕ್ಕಳು ಅಸ್ವಸ್ಥರಾಗಿದ್ದು, ಹಾಗಾಗಿ ಈ ಬಾರಿಯ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.