ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಮೂರು ತಿಂಗಳು ಕಳೆಯುತ್ತಿದೆ. ಇದೀಗ ಮತ್ತೊಬ್ಬ ಜನಪ್ರಿಯ ನಟ ಧ್ರುವ ಸರ್ಜಾ ಅವರ ಆಪ್ತ, ಮ್ಯಾನೇಜರ್ ಬಂಧನವಾಗಿದೆ.
ಮೇ 26ರಂದು ರಾತ್ರಿ ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಎಂಬಾತನ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು, ಒಬ್ಬೊರಿಗೊಬ್ಬರು ಚೈನ್ ಲಿಂಕ್ ಎನ್ನುವಂತೆ ಇದೀಗ ಹಲ್ಲೆ ಪ್ರಕರಣದಲ್ಲಿ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ಹರ್ಷ ಮತ್ತು ಸುಭಾಷ್ ಎನ್ನುವವರು ಹಲ್ಲೆ ಮಾಡಿದ್ದರು. ವೈಯುಕ್ತಿಕ ಕಾರಣವನ್ನು ಮುಂದಿಟ್ಟುಕೊಂಡು ನಾಗೇಂದ್ರ ಎಂಬಾತ ಹರ್ಷ ಮತ್ತು ಸುಭಾಷ್ ಮೂಲಕ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿಸಿದ್ದ ಎನ್ನಲಾಗಿದೆ. ಈ ನಾಗೇಂದ್ರ ಎನ್ನುವಾತ ಕೆಲವು ದಿನಗಳ ಹಿಂದೆ ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ. ಧ್ರುವ ಸರ್ಜಾ ಕಾರು ಚಾಲಕನಾಗಿ ಕೂಡ ಕೆಲಸ ಮಾಡಿದ್ದ ಎನ್ನುವ ಮಾಹಿತಿ ಇದೆ.
ಈತ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿಸಿದ್ದು, ಈತನ ಕೃತ್ಯಕ್ಕೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಬೆಂಬಲ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಇನ್ನು ಪ್ರಶಾಂತ್ ಪೂಜಾರಿ ತನ್ನ ಜಿಮ್‌ನಲ್ಲಿ ನಟ ಧ್ರುವ ಸರ್ಜಾಗೆ ಕೂಡ ತರಬೇತಿ ನೀಡುತ್ತಿದ್ದರು. ಈ ವೇಳೆ ಇಬ್ಬರ ನಡುವಿನ ಆಪ್ತತೆಯನ್ನು ಕಂಡ ನಾಗೇಂದ್ರ ಹಾಗೂ ಅಶ್ವಿನ್‌ಗೆ ಸಹಿಸಿಕೊಳ್ಳಲು ಆಗದೇ ಈ ರೀತಿ ಹಲ್ಲೆ ಮಾಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಅಶ್ವಿನ್ ಬಂಧನವಾಗಿದ್ದು, ವಿಚಾರಣೆ ಮುಂದುವರಿದಿದೆ.

Social Icons