ನವೋದಯ ಶಾಲೆಗಳಲ್ಲಿ 6ನೇ ಕ್ಲಾಸ್‌ಗೆ ಪ್ರವೇಶಕ್ಕೆ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ

ಬೆಂಗಳೂರು: ಗುಣಮಟ್ಟದ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಜವಾಹರ ನವೋದಯ ವಿದ್ಯಾಲಯಗಳಲ್ಲಿ ತಮ್ಮ ಮಕ್ಕಳನ್ನ ಓದಿಸಬೇಕೆನ್ನುವುದು ಬಹಳಷ್ಟು ಪೋಷಕರ ಕನಸು. ಇದೀಗ ಜವಾಹರ ನವೋದಯ ವಿದ್ಯಾಲಯಗಳಲ್ಲಿ 2025-26ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ದೇಶದಾದ್ಯಂತ ಒಟ್ಟು 653 ಜವಾಹರ ನವೋದಯ ವಿದ್ಯಾಲಯಗಳಿದ್ದು, ಕರ್ನಾಟಕದಲ್ಲಿ 31 ನವೋದಯ ವಿದ್ಯಾಲಯಗಳಿವೆ. ಜಿಲ್ಲೆಗೆ ಒಂದರಂತೆ ಜವಾಹರ ನವೋದಯ ವಿದ್ಯಾಲಯಗಳಿವೆ. ಜೆಎನ್‌ವಿ ಪ್ರವೇಶಾತಿ ಅರ್ಹತಾ ಪರೀಕ್ಷೆಯನ್ನು ದೇಶದಾದ್ಯಂತ ಎರಡು ಹಂತಗಳಲ್ಲಿ ನಡೆಸಲಿದೆ. 1ನೇ ಹಂತದ ಪರೀಕ್ಷೆ 2025ರ ಜ.18ರಂದು ಮತ್ತು 2ನೇ ಹಂತದ ಪರೀಕ್ಷೆ  ಎ.12ರಂದು ನಡೆಯಲಿದೆ. ಕರ್ನಾಟಕದಲ್ಲಿ 2025 ರ ಜನವರಿ 18 ರಂದು ಪರೀಕ್ಷೆ ನಡೆಯಲಿದೆ. ಜವಾಹರ ನವೋದಯ ವಿದ್ಯಾಲಯ ಪ್ರವೇಶಾತಿ ಆಯ್ಕೆ ಪರೀಕ್ಷೆಗೆ 2024ರ ಜು.16ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಸೆ.16ರವರೆಗೆ ಸಲ್ಲಿಸಬಹುದು.

ಜವಾಹರ ನವೋದಯ ವಿದ್ಯಾಲಯ ಪ್ರವೇಶಾತಿ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು https://navodaya.gov.in ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು / ಪೋಷಕರು ವೆಬ್‌ಸೈಟ್ https://cbseitms.rcil.gov.in/nvs/ ಗೆ ಭೇಟಿ ನೀಡಿ,  ತೆರೆದ ವೆಬ್‌ಪೇಜ್‌ನಲ್ಲಿ 'Candidates Corner' ಅಡಿಯಲ್ಲಿ 'Click Here For Registration For Class VI JNVST (2025-26) ಎಂದಿರುವ ಲಿಂಕ್‌ ಕ್ಲಿಕ್ ಮಾಡಬೇಕು. ಆಗ ಆನ್‌ಲೈನ್‌ ಅರ್ಜಿಯ ಸರಳ ನಮೂನೆ ವೆಬ್‌ಪೇಜ್‌ ಓಪನ್‌ ಆಗುತ್ತದೆ. ಇಲ್ಲಿ ಕೇಳಲಾಗುವ ಮಾಹಿತಿಗಳನ್ನು ಓದಿಕೊಂಡು ಆಯ್ಕೆ ಮಾಡಿ, ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು. ಆನ್‌ಲೈನ್‌ ಅರ್ಜಿಗೆ 5ನೇ ತರಗತಿ ಓದಿದ /ಓದುತ್ತಿರುವ ಶಾಲಾ ಹೆಡ್‌ಮಾಸ್ಟರ್‌ರಿಂದ ವಿದ್ಯಾರ್ಥಿ ವ್ಯಾಸಂಗ ಪ್ರಮಾಣ ಪತ್ರ, ವಿದ್ಯಾರ್ಥಿ ಭಾವಚಿತ್ರ., ಪೋಷಕರ ಸಹಿ ಸ್ಕ್ಯಾನ್‌ ಕಾಪಿ, ವಿದ್ಯಾರ್ಥಿ ಸಹಿ ಸ್ಕ್ಯಾನ್‌ ಕಾಪಿ, ಆಧಾರ್ ಕಾರ್ಡ್‌ ಅಥವಾ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಜೆಪಿಜಿ ಫಾರ್ಮ್ಯಾಟ್‌ನಲ್ಲಿ 10-100kb ಮೀರದಂತೆ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಎರಡು ವಾರಕ್ಕೂ ಮುಂಚಿತವಾಗಿ ಅಡ್ಮಿಟ್‌ ಕಾರ್ಡ್‌ ಬಿಡುಗಡೆ ಮಾಡಲಾಗುತ್ತದೆ. ಈ ಸಮಯದಲ್ಲಿ ರಿಜಿಸ್ಟ್ರೇಷನ್‌ ನಂಬರ್ ಮೂಲಕ ಲಾಗಿನ್‌ ಆಗುವ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

 ಆಯಾ ಜಿಲ್ಲೆಯಲ್ಲಿ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಆಯಾ ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಅರ್ಹರಿದ್ದು, ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು 5ನೇ ತರಗತಿಯನ್ನು ಸರ್ಕಾರಿ ಶಾಲೆ ಅಥವಾ ಸರ್ಕಾರದಿಂದ ಮಾನ್ಯತೆ ಹೊಂದಿದ ಶಾಲೆಗಳಲ್ಲಿ ಮಾತ್ರ ಓದಿರಬೇಕು.

2025-26ನೇ ಸಾಲಿನಲ್ಲಿ ಜವಾಹರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು 01-05-2013 ಕ್ಕಿಂತ ಮೊದಲು ಜನಿಸಿರಬಾರದು. ಹಾಗೂ 31-07-2015 ರ ನಂತರ ಜನಿಸಿರಬಾರದು.

ಜೆಎನ್‌ವಿಎಸ್‌ಟಿ 6ನೇ ತರಗತಿ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ಶೇಕಡ.75 ರಷ್ಟು ವಿದ್ಯಾರ್ಥಿಗಳನ್ನು ಆಯಾ ಜಿಲ್ಲೆಯ ಗ್ರಾಮೀಣ ಭಾಗದವರನ್ನು ಆಯ್ಕೆ ಮಾಡಲಾಗುತ್ತದೆ. ಉಳಿದ 25 ಶೇಕಡ ಸೀಟುಗಳನ್ನು ಮೆರಿಟ್‌ ಆಧಾರದಲ್ಲಿ ನಗರ/ ಗ್ರಾಮೀಣ ಭಾಗದವರಿಗೆ ಅವಕಾಶ ನೀಡಲಾಗುತ್ತದೆ.

ಆಯಾ ರಾಜ್ಯದ ಅಧಿಕೃತ ಭಾಷೆ ಜತೆಗೆ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಮಾತ್ರವಲ್ಲದೇ ಇತರೆ ಕೆಲವು ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಕರ್ನಾಟಕದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ಮರಾಠಿ, ಉರ್ದು, ಮಲಯಾಳಂ, ತಮಿಳು ಭಾಷೆಯಲ್ಲಿ ಬರೆಯಲು ಅವಕಾಶ ಇರುತ್ತದೆ.