ಡೆಂಗ್ಯೂ, ಮಲೇರಿಯಾ ಜೊತೆಗೆ ಝಿಕಾ ವೈರಸ್ ಭೀತಿ| ಪುಣೆಯಲ್ಲಿ ದೃಢಪಟ್ಟ ಸೋಂಕು..!!| Zika Virus

ದೆಹಲಿ: ಎಲ್ಲೆಡೆ ಮುಂಗಾರು ಮಳೆಯ ಅಬ್ಬರ ಆರಂಭಗೊಂಡಿದೆ. ಮಳೆಯು ಹೆಚ್ಚಾದಂತೆ ರೋಗ ರುಜಿನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ  ಜನರು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಮಲೇರಿಯಾ, ಡೆಂಗ್ಯೂ ಇತ್ಯಾದಿ ರೋಗಗಳು ಈಗಾಗಲೇ ಕಾಣಿಸಿಕೊಂಡಿದ್ದು, ಇದರ ನಡುವೆ ಇದೀಗ ಪುಣೆಯಲ್ಲಿ ಇಬ್ಬರಲ್ಲಿ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ. ಇದು ಆರೋಗ್ಯ ಇಲಾಖೆಯನ್ನು ಎಚ್ಚರಿಸುವಂತೆ ಮಾಡಿದೆ.



 ಮಹಾರಾಷ್ಟ್ರದ ಪುಣೆ ನಗರದಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು, 46 ವರ್ಷದ ವೈದ್ಯ ಮತ್ತು ಅವರ ಹದಿಹರೆಯದ ಮಗಳಿಗೆ ಝಿಕಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ವ್ಯಕ್ತಿಗೆ ಇತ್ತೀಚೆಗೆ ಜ್ವರ ಮತ್ತು ದದ್ದುಗಳಂತಹ ಲಕ್ಷಣಗಳು ಕಾಣಿಸಿಕೊಂಡಿದ್ದು, ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ(ಎನ್‌ಐವಿ) ಕಳುಹಿಸಲಾಗಿದೆ. ಜೂನ್ 21 ರಂದು, ಅವರ ವರದಿ ಬಂದಿದ್ದು, ಝಿಕಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಪುಣೆ ಮುನ್ಸಿಪಲ್ ಕಾರ್ಪೊರೇಷನ್(PMC)ನ ಆರೋಗ್ಯ ಅಧಿಕಾರಿ ಹೇಳಿದ್ದಾರೆ.

ಹೇಗೆ ಬರುತ್ತದೆ?

ಝಿಕಾ ವೈರಸ್ ಈಡಿಸ್ ಈಜಿಪ್ಟೈ ಎನ್ನುವ ಸೊಳ್ಳೆಯಿಂದ ಉಂಟಾಗುವ ಖಾಯಿಲೆ. ಈ ರೋಗದ ಶೇಕಡಾ 80 ರಷ್ಟು ರೋಗಿಗಳಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸುವುದಿಲ್ಲ. ಕೆಲವು ರೋಗಿಗಳು ಜ್ವರ, ಕೀಲು ನೋವು, ದೇಹದ ನೋವು, ತಲೆನೋವು, ಕೆಂಪು ಕಣ್ಣುಗಳು, ವಾಂತಿ, ಅಸ್ವಸ್ಥತೆ, ಜ್ವರ ಮತ್ತು ದೇಹದ ದದ್ದುಗಳನ್ನು ಅನುಭವಿಸುತ್ತಾರೆ.

ನಿಯಂತ್ರಣ ಹೇಗೆ?

ಸೊಳ್ಳೆಗಳ ನಿಯಂತ್ರಣವೇ ಡೆಂಗ್ಯೂ ಮಲೇರಿಯಾದಂತೆ ಝಿಕಾ ವೈರಸ್ ತಡೆಗೂ ಇರುವ ಪರಿಹಾರ. ಹೀಗಾಗಿ ಮನೆಗಳ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಪ್ಪಿಸಬೇಕು. ಸೊಳ್ಳೆ ಪರದೆಗಳನ್ನು ಬಳಸಿ ಹೆಚ್ಚು ಕಾಲ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಎರಡು ದಿನಗಳ ಕಾಲ ಜ್ವರ ಮುಂದುವರೆದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಚವಾಗಿಡಬೇಕು, ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು ಹಾಗೂ ಮುಚ್ಚಳದಿಂದ ಮುಚ್ಚಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.