ಬರ್ತ್‌ಡೇ ಪಾರ್ಟಿಯಲ್ಲಿ ಡಾನ್ಸ್ ಮಾಡಲು ನಿರಾಕರಿಸಿದ ಇಬ್ಬರು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ Rape




ಲಖನೌ: ಬರ್ತ್‌ಡೇ ಪಾರ್ಟಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದರೆಂದು ಇಬ್ಬರು ಯುವತಿಯರನ್ನು ಅಪಹರಿಸಿರುವ 8 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಘಟನೆ ಸಂಬಂಧಿಸಿ ಪೊಲೀಸರು ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


ನಾಗೇಂದ್ರ ಯಾದವ್, ಅಸನ್ ಸಿಂಗ್, ಕ್ರಿಶ್ ತಿವಾರಿ, ಅರ್ಥಕ್ ಸಿಂಗ್‌, ಅಜಿತ್ ಸಿಂಗ್, ವಿವೇಕ್ ಸೇರ್, ನಿಸಾರ್ ಅನ್ಸಾರಿ ಮತ್ತು ಆದಿತ್ಯ ಸಾಕ್ಷಿ ಬಂಧಿತ ಕಾಮುಕರು. ಪೊಲೀಸರು ಇಬ್ಬರಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ.


ಸೆಪ್ಟೆಂಬರ್ 8ರಂದು ರಾತ್ರಿ ಆರ್ಕೆಸ್ಟ್ರಾ ನಡೆಯುತ್ತಿದ್ದ ಸಂದರ್ಭ ಇಬ್ಬರು ಡ್ಯಾನ್ಸರ್‌ಗಳನ್ನು ಆರೋಪಿಗಳು ಗನ್ ತೋರಿಸಿ ಅಪಹರಿಸಿದ್ದಾರೆ. ಬಳಿಕ ಸ್ನೇಹಿತನ ಬರ್ತಡೇ ಪಾರ್ಟಿಯಿದ್ದು, ಅಲ್ಲಿ ಡ್ಯಾನ್ಸ್ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಯುವತಿಯರು ಒಪ್ಪದಿದ್ದಾಗ ಕುಡಿದ ನಶೆಯಲ್ಲಿದ್ದ ಆರೋಪಿಗಳು ಇಬ್ಬರ ಮೇಲೆಯೂ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.


ಈ ಕುರಿತು ದೂರು ದಾಖಲಾದ ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರು ಮಂದಿ ಆರೋಪಿಗಳನ್ನು ಘಟನೆ ನಡೆದ 24ಗಂಟೆಯೊಳಗೆ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕಾರಣ ಅವರ ಕಾಲಿಗೆ ಫೈರಿಂಗ್ ಮಾಡಿ ಅರೆಸ್ಟ್ ಮಾಡಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಡರಾತ್ರಿಯಾಗಿದ್ದರಿಂದ ಯುವತಿಯರು ನೃತ್ಯ ಮಾಡಲು ನಿರಾಕರಿಸಿದ್ದರು. ಬಂದೂಕು ತೋರಿಸಿ ಅಪಹರಿಸಿ ಅತ್ಯಾಚಾರ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.


ಬಂಧಿತ ಆರೋಪಿಗಳನ್ನು ಖುಷಿನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯುವತಿಯರ ವೈದ್ಯಕೀಯ ಪರೀಕ್ಷೆ ಮುಗಿದಿದ್ದು ವರದಿಗಾಗಿ ಕಾಯಲಾಗುತ್ತಿದೆ. ಘಟನೆ ಸಂಬಂಧ ಕೃತ್ಯಕ್ಕೆ ಬಳಸಿದ್ದ ಎರಡು ಫಾರ್ಚುನ‌ರ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಮಿಶ್ರಾ ತಿಳಿಸಿದ್ದಾರೆ.