ಗುಜರಾತ್: ತಾಯಿಯನ್ನೇ ಪುತ್ರನೋರ್ವನು ಬರ್ಬರವಾಗಿ ಹತ್ಯೆಗೈದು ಇನ್‌ಸ್ಟಾಗ್ರಾಮ್ ಮತ್ತು X ನಲ್ಲಿ ಪೋಸ್ಟ್ ಮಾಡಿರುವ ಘಟನೆ ರಾಜ್‌ಕೋಟ್‌ನಲ್ಲಿ ನಡೆದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂದಧಿಸಿದ್ದಾರೆ. ಈ ಕೊಲೆ ಹಿಂದಿರುವ ಕಾರಣ ಕೇಳಿ ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದಿದ್ದಾರೆ.
ಮೃತ ಮಹಿಳೆಯನ್ನು ಜ್ಯೋತಿಬೆನ್ ಗೋಸೈನ್ ಎಂದು ಗುರುತಿಸಲಾಗಿದ್ದು, ಆರೋಪಿ ಯುವಕನ ಹೆಸರು ನೀಲೇಶ್ ಗೋಸಾಯಿ. ಈತ ತಾಯಿಯನ್ನು ಕೊಂದು ಆಕೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಕ್ಷಮೆ ಯಾಚಿಸಿದ್ದಾನೆ.
ಈತ ತಾಯಿಯನ್ನು ಕೊಂದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ 'ನನ್ನನ್ನು ಕ್ಷಮಿಸಿ ತಾಯಿ, ನಾನು ನಿನ್ನನ್ನು ಕೊಂದಿದ್ದೇನೆ, ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ, ಓಂ ಶಾಂತಿ' ಎಂದು ಶೀರ್ಷಿಕೆ ನೀಡಿದ್ದಾನೆ. ಇನ್ನೊಂದು ಮತ್ತು Xನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ "ನನ್ನ ತಾಯಿಯನ್ನು ಕೊಲ್ಲುತ್ತಿದ್ದೇನೆ, ಪ್ರಾಣ ಕಳೆದುಕೊಳ್ಳುತ್ತಿದ್ದೇನೆ, ಕ್ಷಮಿಸಿ ಅಮ್ಮ, ಓಂ ಶಾಂತಿ, ಐ ಮಿಸ್ ಯೂ ಅಮ್ಮ" ಎಂದು ಸಂವೇದನಾಶೀಲ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿದಾಗ ಆರೋಪಿ ನೀಲೇಶ್ ತನ್ನ ತಾಯಿಯ ಮೃತದೇಹದ ಬಳಿ ಕುಳಿತಿದ್ದ. ಪೊಲೀಸ್ ವಿಚಾರಣೆ ವೇಳೆ ನೀಲೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತನ್ನ ತಾಯಿಯನ್ನು ಹೇಗೆ ಮತ್ತು ಏಕೆ ಕೊಂದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಮೊದಲು ತನ್ನ ತಾಯಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ತಾಯಿ ಆತನಿಂದ ಚಾಕುವನ್ನು ಕಸಿದುಕೊಂಡಿದ್ದಾರೆ. ಈ ವೇಳೆ ಆತ ತಾಯಿಯ ಕತ್ತು ಹಿಸುಕಿ ಸಾಯಿಸಿದ್ದಾನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಜ್ಯೋತಿಬೆನ್ ಗೋಸೈನ್ ಮಾನಸಿಕ ಅಸ್ವಸ್ಥಳಾಗಿದ್ದಳು. ಇದರಿಂದ ತಾಯಿ-ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜ್ಯೋತಿಬೆನ್ ವಿಚ್ಛೇದನ ಪಡೆದಿದ್ದಾರೆ. 20 ವರ್ಷಗಳ ಹಿಂದೆ ಆಕೆಯ ಮದುವೆ ಮುರಿದುಬಿದ್ದಿತ್ತು. ಇದರಿಂದಾಗಿ ಆಕೆಯ ಸ್ಥಿತಿ ಹದಗೆಟ್ಟಿತು. ಜ್ಯೋತಿಬೆನ್ ಜೊತೆ ಯಾವುದೋ ವಿಷಯಕ್ಕೆ ಜಗಳವಾಡಿದ ನೀಲೇಶ್ ತನ್ನ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಆತ ಹೇಳಿದ್ದಾನೆ.

Social Icons