ಕೋಟ್ಯಾಂತರ ಖರ್ಚು ಮಾಡಿ ಕಟ್ಟಿಸಿದ ಸಂಸತ್ತಿನೊಳಗೆ ಮಳೆ ನೀರು ಸೋರಿಕೆ: ಕಾಂಗ್ರೆಸ್​ ಟೀಕೆ- WATER LEAKEGE

 


ನವದೆಹಲಿ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೂತನವಾಗಿಬ  ಕಟ್ಟಿಸಿರುವ ಪಾರ್ಲಿಮೆಂಟ್ ​ ಭವನದ ಒಂದು ಭಾಗದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಸಂಸತ್​ ಪ್ರವೇಶ ದ್ವಾರದ ಮುಂಭಾಗದ ಮೊಗಸಾಲೆಯ ಮಧ್ಯಭಾಗದಲ್ಲಿ ನೀರು ಜಿನುಗುತ್ತಿದೆ. ಇದರ ವಿಡಿಯೋವನ್ನು ಕಾಂಗ್ರೆಸ್​ ಸಂಸದ ಮಾಣಿಕ್ಕಂ ಠಾಗೋರ್  ಟ್ವಿಟರ್ '​ ಖಾತೆಯಲ್ಲಿ ಹಂಚಿಕೊಂಡಿದ್ದು, ಅಧಿವೇಶನವನ್ನು ಮುಂದೂಡಬೇಕು ಎಂದು ನಿರ್ಣಯ ಮಂಡಿಸಿದ್ದಾರೆ.

 

ಸಂಸತ್​ ಪ್ರವೇಶದ ಬಳಿಕ ಬರುವ ದೊಡ್ಡ ಲಾಬಿ ಮಧ್ಯಭಾಗದಲ್ಲಿ ನೀರಿನ ಹನಿಗಳು ಬೀಳುತ್ತಿವೆ. ನೀರನ್ನು ಹಿಡಿಯಲು ಪ್ಲಾಸ್ಟಿಕ್​​ ಬಕೆಟ್ಗಳನ್ನು ​ ಇಡಲಾಗಿದೆ. ಸಂಸತ್​ ಭವನ ಉದ್ಘಾಟನೆಯಾಗಿ ಒಂದು ವರ್ಷ ಕಳೆಯುವ ಮೊದಲೇ ಸೋರುತ್ತಿದೆ ಎಂದು ಕಾಂಗ್ರೆಸ್​ ಟೀಕಿಸಿದೆ.

 

'ಹೊರಗೆ ಪೇಪರ್ ಸೋರಿಕೆ, ಸಂಸತ್ತಿನೊಳಗೆ ನೀರು ಸೋರಿಕೆ. ರಾಷ್ಟ್ರಪತಿಗಳು ಬರುವ ಸಂಸತ್ತಿನ ಮೊಗಸಾಲೆಯಲ್ಲಿ ಮಳೆ ನೀರು ಸೋರುತ್ತಿದೆ. ಹೊಸ ಸಂಸತ್​ ಕಟ್ಟಡದಲ್ಲಿ ತುರ್ತು ಹವಾಮಾನ ಎಚ್ಚರಿಕೆ ವಹಿಸಬೇಕಿದೆ. ಕಟ್ಟಡ ಉದ್ಘಾಟನೆಯಾದ ಒಂದು ವರ್ಷದಲ್ಲಿ ಇಂತಹ ಅಪಸವ್ಯ ಕಂಡುಬಂದಿದ್ದು, ಅಧಿವೇಶನ ಮುಂದೂಡುವ ಬಗ್ಗೆ ನಿರ್ಣಯ ಮಂಡಿಸಲಾಗುತ್ತಿದೆ' ಎಂದು ಮಾಣಿಕ್ಕಂ ಠಾಗೋರ್ ಹೇಳಿದ್ದಾರೆ.

 

 

ಭಾರೀ ಮಳೆಗೆ ದೇಶದ ದೇಗುಲ ಎಂದೇ ಕರೆಯಲಾಗುವ ಸಂಸತ್ತೇ ಸೋರುತ್ತಿರುವುದು ಕಳವಳಕಾರಿಯಾಗಿದೆ. ಕಟ್ಟಡವನ್ನು ಸಂಪೂರ್ಣವಾಗಿ ಪರಿಶೀಲಿಸಲು ಎಲ್ಲಾ ಪಕ್ಷದ ಸಂಸದರನ್ನು ಒಳಗೊಂಡ ವಿಶೇಷ ಸಮಿತಿ ರಚಿಸಬೇಕು ಎಂದು ಠಾಗೋರ್‌ ಹೇಳಿದ್ದಾರೆ.