ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಬೇಟೆಗಾಗಿ ಸ್ಪರ್ಧಿಸುತ್ತಿದ್ದಾರೆ ಈಜಿಪ್ಟ್‌ ಕ್ರೀಡಾಪಟು ತುಂಬು ಗರ್ಭಿಣಿ ನದಾ ಹಫೀಝ್



ಪ್ಯಾರಿಸ್‌: ಒಲಿಂಪಿಕ್ಸ್ ಕ್ರೀಡೆಯಲ್ಲಿ ಕತ್ತಿವರೆಸೆಗೆ ತನ್ನದೇ ಆದ ಸ್ಥಾನವಿದೆ. ಅತ್ಯಂತ ಸೂಕ್ಷ್ಮ ಸಂಕೀರ್ಣ ಹಾಗೂ ಸವಾಲಿನ ಈ ಕ್ರೀಡೆಯಲ್ಲಿ ಪುರುಷರಿಗೆ ಪೈಪೋಟಿ ನೀಡುವಂತೆ ಮಹಿಳೆಯರೂ ಭಾಗವಹಿಸುತ್ತಿದ್ದಾರೆ. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿನ ಕತ್ತಿ ವರಸೆ ಆಟವು ಈಜಿಪ್ಟ್ ಆಟಗಾರ್ತಿಯಿಂದ ವಿಶಿಷ್ಟ ರಂಗು ಪಡೆದುಕೊಂಡಿದೆ. ಝಾನ್ಸಿರಾಣಿ ಲಕ್ಷ್ಮಿಬಾಯಿ ತಮ್ಮ ಪುಟ್ಟ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ರಣರಂಗದಲ್ಲಿ ಕೆಚ್ಚೆದೆಯಿಂದ ಹೋರಾಡಿದ ರಾಣಿ ಎಂಬ ಹಿರಿಮೆಗೆ ಭಾಜನವಾಗಿದ್ದರೆ, ಈಜಿಪ್ಟ್‌ನ ಈ ನದಾ ಹಫೀಝ್ ತಮ್ಮ ಮಗುವನ್ನು ಗರ್ಭದಲ್ಲಿಟ್ಟುಕೊಂಡು ಚಿನ್ನದ ಪದಕಕ್ಕಾಗಿ ಹೋರಾಡುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.


ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ನದಾ ಹಫೀಝ್ ಜಾಗತಿಕ ಗಮನ ಸೆಳೆದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಅವರು, ತಮ್ಮ ಗರ್ಭಧಾರಣೆಯ ಸುದ್ದಿಯನ್ನು ಇನ್ಸಾಗ್ರಾಮ್ ನಲ್ಲಿ ಈ ರೀತಿ ಹಂಚಿಕೊಂಡಿದ್ದಾರೆ. "ನಿಮಗೆ ಅಖಾಡದಲ್ಲಿ ಕಾಣಿಸಲಿರುವುದು ಇಬ್ಬರು ಆಟಗಾರರಲ್ಲ. ಬದಲಿಗೆ ಮೂವರು. ಅದು ನಾನು, ನನ್ನ ಪ್ರತಿಸ್ಪರ್ಧಿ ಹಾಗೂ ಇನ್ನಷ್ಟೇ ಪ್ರಪಂಚಕ್ಕೆ ಬರಬೇಕಿರುವ ನನ್ನ ಮಗು!" ಎಂದು ಬರೆದುಕೊಂಡಿದ್ದಾರೆ.


ಗರ್ಭಧಾರಿಣಿಯಾಗಿ ಪ್ರತಿಸ್ಪರ್ಧಿಯೊಂದಿಗೆ ಸ್ಪರ್ಧಿಸುವಾಗ ತಾನು ಎದುರಿಸಿದ ಸವಾಲುಗಳ ಕುರಿತೂ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. “ಅದು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ, ನಾನು ಮತ್ತು ನನ್ನ ಮಗು ಇಬ್ಬರೂ ಸಮಾನವಾಗಿ ಸವಾಲುಗಳನ್ನು ಹಂಚಿಕೊಂಡಿದ್ದೇವೆ" ಎಂದು ಬರೆದುಕೊಂಡಿದ್ದಾರೆ. "ಗರ್ಭಧಾರಣೆಯ ಸಂಭ್ರಮ ತನಗೆ ತಾನೇ ಕಠಿಣವಾಗಿದ್ದರೂ, ಜೀವನ ಹಾಗೂ ಕ್ರೀಡೆಯಲ್ಲಿ ಸಮತೋಲನ ಸಾಧಿಸಲು ಹೋರಾಟ ನಡೆಸುವುದೂ ಅನಿವಾರ್ಯ. ಹೀಗಿದ್ದೂ ಇದು ಬೆಲೆ ಬಾಳುವ ಸಂಗತಿಯೂ ಆಗಿದೆ" ಎಂದೂ ಅವರು ಬರೆದುಕೊಂಡಿದ್ದಾರೆ. ಇದೇ ವೇಳೆ, ತಾನು 16ನೇ ಸುತ್ತಿಗೆ ಅರ್ಹತೆ ಗಿಟ್ಟಿಸಿರುವ ಬಗ್ಗೆ ಹೆಮ್ಮೆಯನ್ನೂ ವ್ಯಕ್ತಪಡಿಸಿದ್ದಾರೆ.


ಕತ್ತಿ ವರಸೆ ಚುರುಕುತನ, ನಾಜೂಕು ಹಾಗೂ ದೈಹಿಕ ಸಾಮರ್ಥ್ಯವನ್ನು ಬಯಸುವ ಕ್ರೀಡೆಯಾಗಿದೆ. ಇಂತಹ ಕ್ರೀಡೆಯಲ್ಲಿ ನದಾ ಹಫೀಝ್ ಗೆ ಶುಭವಾಗಲೆಂದು ಎಲ್ಲ ಕ್ರೀಡಾ ಪ್ರೇಮಿಗಳು ಹಾರೈಸುತ್ತಿದ್ದಾರೆ.