ಉಳ್ಳಾಲ: ನಟೋರಿಯಸ್ ರೌಡಿ ಕಡಪ್ಪರ ಸಮೀರ್‌ ಭೀಕರ ಹತ್ಯೆ - ತಾಯಿಯೊಂದಿಗೆ ಇದ್ದಾಗಲೇ ಅಟ್ಟಾಡಿಸಿ ಕೊಂದರು

 


ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ಹತ್ಯೆ ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿ ಉಳ್ಳಾಲದ ನಟೋರಿಯಸ್ ರೌಡಿ ಕಡಪ್ಪರ ಸಮೀರ್‌ನನ್ನು ತಂಡವೊಂದು ಅಟ್ಟಾಡಿಸಿಕೊಂಡು ತಲವಾರಿನಲ್ಲಿ ಕಡಿದು ಬರ್ಬರವಾಗಿ ಕೊಲೆಗೈದ ಘಟನೆ ವಿವಾರ ರಾತ್ರಿ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ವಿ.ಕೆ.ಫರ್ನಿಚರ್ ಬಳಿ ನಡೆದಿದೆ.


ಕಡಪ್ಪರ ಸಮೀರ್ ರವಿವಾರ ರಾತ್ರಿ ತಾಯಿ ಹಾಗೂ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಕಲ್ಲಾಪುವಿನಲ್ಲಿರುವ ಫಾಸ್ಟ್ ಫುಡ್‌ವೊಂದಕ್ಕೆ ಉಪಹಾರಕ್ಕೆ ಕಾರಿನಲ್ಲಿ ತೆರಳಿದ್ದನು. ಈ ವೇಳೆ ಅವರನ್ನು ಹಿಂಬಾಲಿಸಿದ ತಂಡವೊಂದು ಸಮೀರ್ ಕಾರಿನಿಂದ ಇಳಿಯುತ್ತಿದ್ದಂತೆ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದಾರೆ. ಅಪಾಯವನ್ನು ಅರಿತ ಸಮೀರ್ ಅಲ್ಲಿಂದ ಓಡಿದ್ದಾನೆ. ತಂಡ 500ಮೀ. ದೂರವಿರುವ ವಿ.ಕೆ.ಫರ್ನಿಚರ್ ಇರುವಲ್ಲಿವರೆಗೆ ಅಟ್ಟಾಡಿಸಿಕೊಂಡು ಓಡಿಸಿದೆ.


ಘಟನೆ ನಡೆಯುತ್ತಿದ್ದಂತೆ ಕಲ್ಲಾಪು ಜಂಕ್ಷನ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಸಮೀರ್‌ಗಾಗಿ ಹುಡುಕಾಟ ನಡೆಸಿದೆ. ತಡರಾತ್ರಿ ಸಮೀರ್ ಮೃತದೇಹವು ವಿಕೆ ಫರ್ನಿಚರ್ ಬಳಿಯ ಪೊದೆಯಲ್ಲಿ ಸಿಕ್ಕಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


ಸಮೀರ್ ಮತ್ತು ಆತನ ತಂಡವು ಇತ್ತೀಚಿಗಷ್ಟೆ ದರೋಡೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿತ್ತು. ಎರಡು ದಿನಗಳ ಹಿಂದಷ್ಟೆ ಸಮೀರ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.  ಜೈಲಿನಲ್ಲಿಯೇ ಕಳೆದ ತಿಂಗಳು ತಂಡವೊಂದು ಸಮೀರ್‌ ಕೊಲೆಗೆ ಯತ್ನಿಸಿತ್ತು. ಅಲ್ಲಿ ಆತ ಬಚಾವಾಗಿದ್ದ ಎನ್ನಲಾಗಿದೆ. ಜೈಲಿನಿಂದ ಹೊರಬರುತ್ತಲೇ ದುಷ್ಕರ್ಮಿಗಳು ಆತನನ್ನು ಹತ್ಯೆಗೈದಿದ್ದಾರೆ.