ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ 'ಡಿ ಬಾಸ್'ಗೆ ತಪ್ಪದ ಸಂಕಷ್ಟ: ಎಫ್ಎಸ್ಎಲ್ ಸ್ಪೋಟಕ ಸತ್ಯ ಬಯಲು



ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಡಿ ಬಾಸ್, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯವೊಂದು ಬಯಲಾಗಿದ್ದು, ದರ್ಶನ್ ಹಾಗೂ ಸಹಚರರಿಗೆ ಜೈಲೂಟ ಗ್ಯಾರಂಟಿ ಎನ್ನಲಾಗುತ್ತಿದೆ.


ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ನಟ ದರ್ಶನ್ ವಿರುದ್ಧ ಅತಿದೊಡ್ಡ ರಹಸ್ಯ ಬಯಲಾಗಿದೆ. ಕೊಲೆ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆಯ ಮೇಲೆ ರೇಣುಕಸ್ವಾಮಿಯ ರಕ್ತ ಅಂಟಿದ್ದು, ಇದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಈ ಸಾಕ್ಷಿ ದರ್ಶನ್ ವಿರುದ್ಧದ ಅರೋಪವನ್ನು ಸಾಬೀತುಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.


ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 60ಕ್ಕೂ ಅಧಿಕ ಸಾಕ್ಷಿಗಳನ್ನು ಸಂಗ್ರಹಿಸಿ ಎಫ್ಎಸ್ಎಲ್‌ಗೆ ಕಳುಹಿಸಿದ್ದರು. ಇದರಲ್ಲಿ ದರ್ಶನ್ ಧರಿಸಿದ್ದ ಬಟ್ಟೆ ಹಾಗೂ ಶೂ ಕೂಡ ಇತ್ತು. ಹತ್ಯೆಯ ದಿನ ದರ್ಶನ್ ಧರಿಸಿದ್ದರು ಎನ್ನಲಾದ ನೀಲಿ ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಟಿ ಶರ್ಟ್‌ನಲ್ಲಿ ರಕ್ತದ ಕಲೆ ಕಂಡು ಬಂದಿದೆ. ಇವುಗಳು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ.


ಇದೀಗ ಈ ಬೆಳವಣಿಗೆ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದೊಡಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಅಥವಾ ಸ್ಪೆಷಲ್ ಕೋರ್ಟ್ ಬೇಕು ಎಂದು ಪೊಲೀಸರು ಮನವಿ ಮಾಡಿದ್ದು, ದರ್ಶನ್ ಮತ್ತು ಗ್ಯಾಂಗ್‌ಗೆ ಜೈಲೂಟ ಕಾಯಂ ಆಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ.