ಧರ್ಮಸ್ಥಳ: ಕಾಡಿನಿಂದ ರಸ್ತೆಗಿಳಿದ ಕಾಡಾನೆಯೊಂದ ವಾಹನಗಳನ್ನು ಬಸ್ ಹಾಗೂ ದ್ವಿಚಕ್ರ ವಾಹನಗಳನ್ನು ಹಾನಿಗೊಳಿಸಿದ ಘಟನೆ ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಗುರುವಾರ ಬೆಳಗ್ಗೆ 7.40ರ ಸುಮಾರಿಗೆ ಕಾಡನೆಯೊಂದು ಬೊಳಿಯಾರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ. ರಸ್ತೆ ದಾಟುತ್ತಿದ್ದ ಕಾಡಾನೆ ರಸ್ತೆಯಲ್ಲಿಯೇ ನಿಂತಿತ್ತು. ಈ ಸಂದರ್ಭ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ಅಡ್ಡಗಟ್ಟಿದ ಕಾಡಾನೆ ಬಸ್ಸಿನ ಮುಂಭಾಗಕ್ಕೆ ತಿವಿದಿದೆ. ಪರಿಣಾಮ ಬಸ್ಸಿನ ಮುಂಭಾಗ ಜಖಂಗೊಂಡಿದೆ.
ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಇದೇ ವೇಳೆ ರಸ್ತೆಯಲ್ಲಿ ಬಂದ ದ್ವಿಚಕ್ರ ವಾಹನದ ಮೇಲೆ ದಾಳಿ ನಡೆಸಲು ಆನೆ ಯತ್ನಿಸಿದೆ. ಈ ವೇಳೆ ವಾಹನ ಬಿಟ್ಟು ಸವಾರ ಆನೆಯಿಂದ ತಪ್ಪಿಸಿಕೊಂಡಿದ್ದು ವಾಹನವನ್ನು ಕಾಡಾನೆ ಹಾನಿಗೊಳಿಸಿದೆ.
ಬೊಳಿಯಾರು ಹಾಗೂ ಮುಳಿಕಾರು ಪರಿಸರದಲ್ಲಿ ಎರಡು ದಿನಗಳಿಂದ ಕಾಡಾನೆಗಳ ಹಿಂಡು ತಿರುಗಾಡುತ್ತಿದ್ದು ಕೃಷಿಕರಿಗೆ ತೊಂದರೆಯುಂಟುಮಾಡುತ್ತಿದೆ. ಇದೀಗ ಹೆದ್ದಾರಿಗೆ ಕಾಡಾನೆ ಇಳಿದಿರುವುದು ಜನರಲ್ಲಿ ಭಯ ಹೆಚ್ಚಿಸಿದೆ.

Social Icons