ಮಂಗಳೂರು: ಧ್ವಜ ಅವರೋಹಣ ಮಾಡುತ್ತಿದ್ದಾಗ ವಿದ್ಯುತ್ ಆಘಾತದಿಂದ ಕ್ರೈಸ್ತ ಧರ್ಮಗುರು ಮೃತ್ಯು



ಮಂಗಳೂರು: ಧ್ವಜ ಅವರೋಹಣ ಮಾಡುತ್ತಿದ್ದ ವೇಳೆ ಧ್ವಜಸ್ತಂಭಕ್ಕೆ ವಿದ್ಯುತ್ ಆಘಾತಗೊಂಡು ನಡೆದ ಅವಘಡದಲ್ಲಿ ಕ್ರೈಸ್ತ ಧರ್ಮಗುರುವೊಬ್ಬರು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದಲ್ಲಿ ನಡೆದಿದೆ. 

ಮುಳ್ಳೇರಿಯಾ ಇನ್ಫೇಂಟ್ ಜೀಸಸ್ ಚರ್ಚ್ ಧರ್ಮಗುರು ಫಾ. ಮ್ಯಾಥ್ಯು ಕುಡಿಲಿಲ್(30) ಮೃತಪಟ್ಟವರು.

ಚರ್ಚ್ ಆವರಣದಲ್ಲಿ ಬೆಳಗ್ಗೆ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಸಂಜೆ ವೇಳೆಗೆ ಧ್ವಜ ಅವರೋಹಣ ಮಾಡಲಾಗುತ್ತಿತ್ತು‌. ಈ ವೇಳೆ ಧ್ವಜಸ್ತಂಭದ ಕಬ್ಬಿಣದ ಕಂಬ ವಾಲಿದ್ದು, ವಿದ್ಯುತ್‌ ತಂತಿಗೆ ಬಿದ್ದಿತ್ತು‌. ಪರಿಣಾಮ ತ್ರಿವರ್ಣ ಧ್ವಜವನ್ನು ಮಡಚಿ ಕಟ್ಟುತ್ತಿದ್ದ ಫಾ.ಮ್ಯಾಥ್ಯು ಕುಡಿಲಿಲ್ ವಿದ್ಯುತ್ ಶಾಕ್ ಆಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಅವರ ಜೊತೆಗಿದ್ದ ಫಾ.ಸೆಬಿನ್ ಜೋಸೆಫ್(29) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.