ಬೆಂಗಳೂರು: ಇಂದಿನ ಯುವಪೀಳಿಗೆ ಎಲ್ಲಿಯಮಟ್ಟಿಗೆ ದಾರಿತಪ್ಪುತ್ತಿದೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಿದು. ಬೆಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿದ್ದ 15 ವರ್ಷದ ಬಾಲಕಿ ಅಪ್ಪಾ ನನಗೆ ಹೊಟ್ಟೆ ನೋವು ಎಂದು ಹೇಳಿಕೊಂಡಾದ ಅವರ ತಂದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗಳಿಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋಗಿದ್ದ ತಂದೆಗೆ ಶಾಕ್ ಆಗಿದೆ. ಯಾಕೆಂದರೆ ಮಗಳನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದು ನಿಮ್ಮ ಮಗಳು ಗರ್ಭಿಣಿ ಎಂದು.
ಬಾಲಕಿಯನ್ನು ಪ್ರೀತಿಸಿ, ಮದುವೆಯ ಭರವಸೆ ನೀಡಿ ಅತ್ಯಾಚಾರ ಮಾಡಿದ್ದಲ್ಲದೇ ಈ ಬಗ್ಗೆ ಬಾಲಕಿಯ ತಂದೆ ತಾಯಿ ಪ್ರಶ್ನೆ ಮಾಡಿದರೆ ಸಂತ್ರಸ್ಥ ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಜೊತೆಗೆ, ನನಗೆ ರೌಡಿಗಳ ಪರಿಚಯವಿದ್ದು, ನಿಮ್ಮ ಮಗಳನ್ನ ಹಾಗೂ ನಿಮ್ಮನ್ನು ಬಿಡುವುದಿಲ್ಲ ಅಂಥ ಬೆದರಿಕೆ ಹಾಕಿದ್ದಾನಂತೆ. ಜೊತೆಗೆ ತಂದೆ ಹಾಗೂ ಬಾಲಕಿಯ ಮೇಲೆ ಹಲ್ಲೆಯನ್ನೂ ಮಾಡಿದ್ದಾನಂತೆ. ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ತಂದೆ ತಾಯಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ರಕ್ಷಣೆ ಮಾಡಿದ್ದಾರೆ.
ಇನ್ನು ಆರೋಪಿ ಸಾದ್ ಶಾಲೆಗೆ ಹೋಗುವ ಸುಮಾರು 8 ಅಮಾಯಕ ಹೆಣ್ಣುಮಕ್ಕಳನ್ನ ಇದೇ ರೀತಿ ಪ್ರೀತಿ, ಪ್ರೇಮದ ಬಲೆಯೊಡ್ಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಬಾಲಕಿಯ ತಂದೆ ಆರೋಪ ಮಾಡಿದ್ದಾರೆ. ಆದರೆ ಅವರಾರೂ ದೂರು ಕೊಡಲು ಮುಂದೆ ಬರುತ್ತಿಲ್ಲ. ಹೀಗಾಗಿ, ಎಲ್ಲರ ಪರವಾಗಿ ನಾನೇ ಮುಂದೆ ಬಂದು ದೂರು ನೀಡ್ತಿದ್ದೇನೆ. ಇನ್ನು ಬಾಲಕಿ ತಂದೆಯ ದೂರಿನನ್ವಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಗಳಿಗೆ ನ್ಯಾಯ ಕೊಡಿಸಲು ನಿರಂತರವಾಗಿ ಹೋರಾಡುತ್ತಿರುವ ತಂದೆ, ನಗರ ಪೊಲೀಸ್ ಆಯುಕ್ತರಿಗೂ ಆರೋಪಿಯ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಮೊದಲು ಡಿ.ಜೆ.ಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರು. ಇದೀಗ ಕೊನೆಗೂ ಆರೋಪಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಇನ್ನೊಂದೆಡೆ ನನ್ನ ಮಗ ಹೀರೋ ಎಂದು ಇನ್‌ಸ್ಟಾಗ್ರಾಂ ನಲ್ಲಿ ಆರೋಪಿಯ ತಾಯಿ ಪೋಸ್ಚ್ ಮಾಡಿದ್ದಾರಂತೆ. ಆತನ ಕುಟುಂಬದಿಂದ ನಮಗೆ ಜೀವಬೆದರಿಕೆ ಇದೆ ಎಂದು ದೂರು ಕೊಟ್ಟಿದ್ದಾರೆ. ಸದ್ಯ ಡಿಜೆ.ಹಳ್ಳಿ ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಆರೋಪಿ ಸಾದ್ ಡ್ರಾಗರ್ ಹಿಡಿದು ಫೋಸ್ ಕೊಟ್ಟ ಫೋಟೋ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಬರ್ತಡೇ ಸೆಲೆಬ್ರೇಷನ್ ವೇಳೆ ಡ್ರ್ಯಾಗರ್ ಹಿಡಿದು ಫೋಸ್ ಕೊಟ್ಟಿದ್ದು, ಈತನ ಪುಂಡಾಟಿಕೆಯನ್ನು ಪೊಲೀಸರು ಕೂಡ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇನ್ನು ಸದ್ಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಡಿ.ಜೆ.ಹಳ್ಳಿ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Social Icons