BANTWAL: ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ


ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಯೋರ್ವ ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಗಸ್ಟ್ 7 ರಂದು ರಾತ್ರಿ ವೇಳೆ ನಡೆದಿದೆ.


ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ ( 15) ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಬಡಕಬೈಲು  ಖಾಸಗಿ ಶಾಲೆಯ  ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದ ಈತ ಕಲಿಕೆ ವಿಚಾರದಲ್ಲಿ ಆತ್ಮಹತ್ಯೆ ‌ಮಾಡಿಕೊಂಡಿರಬಹುದು ಎಂಬುದನ್ನು ಮನೆಯವರು ತಿಳಿಸಿದ್ದಾರೆ.

ರಾತ್ರಿ ಸುಮಾರು 7.30 ಗಂಟೆಗೆ ಸ್ನಾನ ಮಾಡಲೆಂದು ಬಚ್ಚಲು ಕೋಣೆಗೆ ತೆರಳಿದ ಮಗ 8 ಗಂಟೆಯಾದರೂ ವಾಪಸು ಬಾರದ್ದನ್ನು ಕಂಡ ತಾಯಿ ಬಾಗಿಲು ಬಡಿದರೂ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಬಾಗಿಲು ಮುರಿದು ಒಳಗೆ ನುಗ್ಗಿದಾಗ ಈತ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿರುವುದು ಕಂಡಿದೆ.

ಕೂಡಲೇ ಬಾಲಕನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದಾಗ ಆತ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದರು. ಈ ಬಗ್ಗೆ  ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.