BANTWAL: ಬಂಟ್ವಾಳ: ಪರಿಶಿಷ್ಟ ಜಾತಿ, ಪಂಗಡ ಕುಂದುಕೊರತೆ ಸಭೆ

 

ಬಂಟ್ವಾಳ: ಬಂಟ್ವಾಳದ ಬಿ.ಸಿ.ರೋಡಿನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸೋಮವಾರ ತಹಸೀಲ್ದಾರ್ ಅರ್ಚನಾ ಭಟ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಾಲೂಕು ಮಟ್ಟದ ಸಭೆ ನಡೆಯಿತು.

ಈ ಸಂದರ್ಭ ಸಮುದಾಯದ ಮುಖಂಡರನೇಕರು ನಾನಾ ಅಹವಾಲುಗಳನ್ನು ಮಂಡಿಸಿದರು. ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಜಯಶ್ರೀ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಮನೀಷ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಹಲವು ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪ್ರಶ್ನೆ, ಅಹವಾಲುಗಳಿಗೆ ಉತ್ತರಿಸಿದರು.

ಬಿ.ಸಿ.ರೋಡ್ ನ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ, ಭಜನೆಯಲ್ಲಿ ನಿಷೇಧಿತ ಪದ ಬಳಕೆ ಮಾಡುವುದು, ಮಂಚಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೈದ್ಯರ ಅಲಭ್ಯತೆ, ಸರಕಾರಿ ಶಾಲಾ ಮೈದಾನಗಳಲ್ಲಿ ಕಾರ್ಯಕ್ರಮಗಳು ಮುಗಿದ ಬಳಿಕ ಮಕ್ಕಳ ಬಳಿ ಕಸ ಹೆಕ್ಕಿಸುವುದು, ಸರಕಾರಿ ಶಾಲಾ ಮಕ್ಕಳಿಗೆ ಸಕಾಲಕ್ಕೆ ದೊರಕದ ಸ್ಕಾಲರ್ ಶಿಪ್.ಪುಣಚ ಗ್ರಾಮದಲ್ಲಿ ಸಮುದಾಯ ಭವನ, ದೇವರಾಜ ಅರಸು ನಿಗಮದ ಹಾಸ್ಟೆಲ್ ಗಳ ಸುರಕ್ಷತೆ, ಪುರುಷರಿಗೆ ವಿಶ್ರಾಂತಿ ಕೊಠಡಿ, ಜಲಜೀವನ್ ಮಿಷನ್ ನೀರು ಕನೆಕ್ಷನ್ ಗೆ ಹಣ ವಸೂಲಿ ಸಹಿತ ಹಲವು ವಿಚಾರಗಳನ್ನು ಮುಖಂಡರು ಪ್ರಶ್ನಿಸಿ, ಅಧಿಕಾರಿಗಳಿಂದ ಉತ್ತರ ಪಡೆದುಕೊಂಡರು. ಮುಖಂಡರಾದ ಸತೀಶ್ ಅರಳ, ವಿಶ್ವನಾಥ ಚಂಡ್ತಿಮಾರ್, ಸೇಸಪ್ಪ ಬೆದ್ರಕಾಡು, ಗಂಗಾಧರ, ಚಂದ್ರಹಾಸಸರಪಾಡಿ, ಯು.ಬಿ.ಸದಾಶಿವ ಮತ್ತಿತರರು ನಾನಾ ವಿಚಾರ ಮಂಡಿಸಿದರು.