ಮೂಡುಬಿದಿರೆ: ಕಾಲೇಜು ತರಗತಿಯೊಳಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಚುಚ್ಚಿ ಹಲ್ಲೆ - ಆರೋಪಿ ಅರೆಸ್ಟ್




ಮೂಡುಬಿದಿರೆ: ಇಲ್ಲಿನ ಖಾಸಗಿ ಕಾಲೇಜಿನ ತರಗತಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ವಿದ್ಯಾರ್ಥಿನಿಯೊಬ್ಬಳ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆಗೈದ ಘಟನೆ ಸೋಮವಾರ ನಡೆದಿದ್ದು, ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.


ತುಮಕೂರು ಮೂಲದ ಮಂಜುನಾಥ ಬಂಧಿತ ಆರೋಪಿ.


ಆರೋಪಿ ಹಾಗೂ ಕತ್ತರಿಯಿಂದ ಇರಿತಕ್ಕೊಳಗಾದ ವಿದ್ಯಾರ್ಥಿನಿ ತುಮಕೂರು ಮೂಲದವರಾಗಿದ್ದಾರೆ. ಇಬ್ಬರೂ ಈ ಹಿಂದೆ ಆತ್ಮೀಯರಾಗಿದ್ದರು. ಇತ್ತೀಚೆಗೆ ವಿದ್ಯಾರ್ಥಿನಿಯು ಆರೋಪಿ ಮಂಜುನಾಥನ ಮೊಬೈಲ್ ಕರೆಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಳು ಎಂದು ಹೇಳಲಾಗುತ್ತಿದೆ. ಇದರಿಂದ ಹತಾಶೆಗೊಂಡ ಆರೋಪಿ ಮಂಜುನಾಥ ವಿದ್ಯಾರ್ಥಿನಿಯನ್ನು ಹುಡುಕಿಕೊಂಡು ಬಂದಿದ್ದನು. ಅದರಂತೆ ಸೋಮವಾರ ಕಾಲೇಜಿಗೆ ಬಂದಿದ್ದ ಆತ ತರಗತಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಕತ್ತರಿಯಿಂದ ಚುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಮೂಡುಬಿದಿರೆ ಠಾಣೆಯಲ್ಲಿ ಆರೋಪಿ ಮಂಜುನಾಥನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಇನ್‌ಸ್ಪೆಕ್ಟ‌ರ್ ಸಂದೇಶ್‌ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.