ಸಿನಿಮಿಯ ರೀತಿಯ ಕಾರ್ಯಾಚರಣೆ| ಅಂತಾರಾಜ್ಯ ATM ಕಳ್ಳನ ಸೆರೆಹಿಡಿದ ಖಾಕಿಪಡೆ!

ಬಾಗಲಕೋಟೆ: ಸ್ಟಾರ್​ ನಟರ ಆ್ಯಕ್ಷನ್​ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಗಳು ಕಳ್ಳರ ಗ್ಯಾಂಗ್​ ಅನ್ನು ಚೇಸ್​ ಮಾಡಿ ಸೆರೆಹಿಡಿಯುವ ಶೈಲಿಯನ್ನು ಕಂಡು ನಾವೆಲ್ಲಾ ರೋಮಾಂಚನಕ್ಕೆ ಒಳಗಾಗಿರುತ್ತೇವೆ. ಇಂತಹ ಘಟನೆ ಕೇವಲ ಚಿತ್ರಕ್ಕೆ ಮಾತ್ರ ಸೀಮಿತವೇ? ಅಥವಾ ನಿಜ ಜೀವನದಲ್ಲಿಯೂ ನಡೆಯುತ್ತದೆಯೇ? ಎಂಬ ಹತ್ತು ಹಲವು ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಹಜ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆದಿರುವ ಕೆಲವು ನೈಜ ಘಟನೆಗಳೇ ಸಾಕ್ಷಿ. ಸಿನಿಮಿಯ ಶೈಲಿಗಿಂತಲೂ ಪೊಲೀಸರ ಚೇಸಿಂಗ್​ ಶೈಲಿ ಮತ್ತಷ್ಟು ರೋಚಕವಾಗಿರುತ್ತದೆ ಎಂಬುದನ್ನು ನಮ್ಮ ಖಾಕಿಪಡೆ ಈಗಾಗಲೇ ಸಾಬೀತುಪಡಿಸಿದೆ.



ಇಲ್ಲೊಂದು ಘಟನೆ ಇದೇ ರೀತಿಯಲ್ಲಿ ನಡೆದಿದೆ. ಪೊಲೀಸರು ಸಿನಿಮಿಯ ರೀತಿ ಚೇಸ್ ಮಾಡಿ ಅಂತಾರಾಜ್ಯ ಕಳ್ಳನನ್ನು ಇಳಕಲ್ ಹಾಗೂ ಹುನಗುಂದ ಠಾಣೆ ಪೊಲೀಸರು ಚೇಸ್ ಮಾಡಿ ಕಳ್ಳರನ್ನು ಬಂಧಿಸಿದ್ದಾರೆ. ಪರಾರಿಯಾಗಲು ಕಳ್ಳರು ಮಾಡಿದ ಎಲ್ಲ ಪ್ಲಾನ್ ತಲೆಕೆಳಗೆ ಮಾಡಿ ಬಂಧಿಸಿದ ಪೊಲೀಸರು, ಆಂಧ್ರಪ್ರದೇಶದ ಅನಂತಪುರದಲ್ಲಿ ಗ್ಯಾಸ್ ಕಟರ್​​​ನಿಂದ ಎಟಿಎಂ ಹಣ ದೋಚುತ್ತಿದ್ದ ಕಳ್ಳರ ಗ್ಯಾಂಗ್ ಅನ್ನು ಚೇಸ್ ಮಾಡಿ ಸೆರೆಹಿಡಿದಿದೆ. ಹುನಗುಂದ ಮತ್ತು ಇಳಕಲ್ ಅಧಿಕಾರಿಗಳ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ಮತ್ತು ಶ್ಲಾಘನೆ ವ್ಯಕ್ತವಾಗುತ್ತಿದೆ.

ಕಳ್ಳರು ಅನಂತಪುರದಿಂದ ಕರ್ನಾಟಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಪಡೆದ ಪೊಲೀಸರು, ಹುನಗುಂದ, ಇಳಕಲ್ ಹೆದ್ದಾರಿ 50ರಲ್ಲಿ ದೆಹಲಿ ಪಾಸಿಂಗ್ ವಾಹನ ತಪಾಸಣೆ ಮಾಡಲು ಸೂಚಿಸಿದ್ದ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ, ಎಸ್ಪಿ ಸೂಚನೆ ಮೇರಿಗೆ ಬ್ಯಾರಿಕೇಡ್ ಹಾಕಿದ ಖಾಕಿ ಪಡೆ, ಹುನಗುಂದ ಮಾರ್ಗವಾಗಿ ವಿಜಯಪುರಕ್ಕೆ ಹೋಗುವ ದಾರಿಯ ಬೆಳಗಲ್ ಚೆಕ್ ಪೋಸ್ಟ್​ನಲ್ಲಿ ವಾಹನ ತಡೆದು ತಪಾಸಣೆ ನಡೆಸುತ್ತಿದ್ದರು.ಅದೇ ಮಾರ್ಗದಲ್ಲಿ ಬಂದ ಕಳ್ಳರ ಗ್ಯಾಂಗ್ ಜಾಗೃತರಾಗಿ ತಮ್ಮ ವಾಹನ ಹಿಂತಿರುಗಿಸಿ ಹುನಗುಂದ ಮಾರ್ಗದ ಧನ್ನೂರು-ಮುದ್ದೇಬಿಹಾಳದ ಅಡ್ಡದಾರಿ ಹಿಡಿದು ಪರಾರಿಯಾಗಲು ಯತ್ನಿಸಿದರು. ಈ ವೇಳೆ ಹೈವೇ ಪೊಲೀಸ್ ವಾಹನಕ್ಕೆ ತಮ್ಮ ಕ್ರೆಟಾ ಕಾರಿನಿಂದ ಡಿಕ್ಕಿ ಹೊಡೆದ ಕಳ್ಳರು, ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ಕಾರನ್ನು ಅಲ್ಲೇ ಬಿಟ್ಟು ಹೊಲದಲ್ಲಿ ಓಡಿದ್ದಾರೆ.

ಹೊಲದಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರ ನೆರವು ಪಡೆದ ಪೊಲೀಸರು, ಕಳ್ಳರ ಗ್ಯಾಂಗ್​ ಅನ್ನು ವಾಪಾಸ್ ಹೆದ್ದಾರಿಯಂತೆ ಬರುವಂತೆ ಬ್ಲಾಕ್ ಮಾಡಿಸಿದ್ದಾರೆ. ಕಡೆಗೂ ಇಬ್ಬರನ್ನು ಬಂಧಿಸಿದ ಖಾಕಿಪಡೆ, ವಿಚಾರಣೆ ಬಳಿಕ ಆಂಧ್ರಪ್ರದೇಶಕ್ಕೆ ಕಳಿಸಿಕೊಡಲು ಮುಂದಾಗಿದ್ದಾರೆ.