ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಿಂದಿರುತ್ತಿದ್ದಾಗ ಬೈಕ್‌ಗೆ ಟಿಪ್ಪರ್ ಡಿಕ್ಕಿ: ಗರ್ಭಿಣಿ ಸಾವು, ವಿಲವಿಲ ಒದ್ದಾಡಿ ಅಸುನೀಗಿದ ಕಂದಮ್ಮ




ಬೆಂಗಳೂರು: ಇಲ್ಲಿನ ಹೊರವಲಯದ ನೆಲಮಂಗಲದ ಎಡೇಹಳ್ಳಿ ಬಳಿಯ ಎನ್ಎಚ್ 4ರಲ್ಲಿ ಟಿಪ್ಪರೊಂದು ಡಿಕ್ಕಿಯಾಗಿ ಬೈಕ್ ಹಿಂಬದಿ ಕುಳಿತಿದ್ದ ಗರ್ಭಿಣಿ ಮೃತಪಟ್ಟಿದ್ದು, ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ಹೊರಗಡೆ ಬಂದು ವಿಲವಿಲ ಒದ್ದಾಡಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.


ಎಡೇಹಳ್ಳಿಯ ಸಿಂಚನಾ (30) ಮೃತಪಟ್ಟ ದುರ್ದೈವಿ. ಸಿಂಚನಾ ಪತಿ ಮಂಜುನಾಥ್ ಪವಾಡ ಸದೃಶ ಪಾರಾಗಿದ್ದಾರೆ. ಅಪಘಾತದ ಬಳಿಕ ಸ್ಥಳದಲ್ಲೇ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಿಂಚನಾಗೆ ಆಗಸ್ಟ್ 17ಕ್ಕೆ 9 ತಿಂಗಳು ತುಂಬುತ್ತಿತ್ತು. ಆದ್ದರಿಂದ ಹೆರಿಗೆ ಸುಸೂತ್ರವಾಗಲೆಂದು ದಂಪತಿ ಬೈಕ್‌ನಲ್ಲಿ ದಾಬಸ್ ಪೇಟೆಯಲ್ಲಿರುವ ಶಿವಗಂಗೆಯ‌ಗಣಪತಿ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಆಗಮಿಸಿದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಆಗ ಸಿಂಚನಾ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಆಗ ಟಿಪ್ಪರ್ ಸಿಂಚನಾ ಮೇಲೆಯೇ ಹರಿದ ಪರಿಣಾಮ ಅವರ ಹೊಟ್ಟೆಯಲ್ಲಿದ್ದ 8 ತಿಂಗಳು ಮಗು ಹೊರಗೆ ಬಂದಿದೆ. ನಡು ರಸ್ತೆಯಲ್ಲೇ ಮಗು ವಿಲವಿಲ ಒದ್ದಾಡಿ ಮೃತಪಟ್ಟಿದೆ. ಮನಕಲಕುವ ಘಟನೆ ಕಂಡು ಸ್ಥಳೀಯರು ಕಣ್ಣೀರು ಹಾಕಿದ್ದಾರೆ.


ಮೃತದೇಹದ ಮುಂದೆ ಪತಿ ಮಂಜುನಾಥ್‌ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹದ ರವಾನೆ ಮಾಡಲಾಗಿದೆ.