ಐಟಿ ಕ್ಷೇತ್ರದಲ್ಲಿ ಭಾರೀ ತಲ್ಲಣ.!| 7 ತಿಂಗಳಲ್ಲಿ 1.24 ಲಕ್ಷ ಟೆಕ್‌ ನೌಕರರ ಉದ್ಯೋಗ ಕಡಿತ

ನವದೆಹಲಿ: ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಯಾರೂ ಊಹಿಸಿರದಂತಹ ತಲ್ಲಣ ಮುಂದುವರೆದಿದೆ. ಕಳೆದ ಜುಲೈನಲ್ಲಿ 34 ಕಂಪನಿಗಳ ಸುಮಾರು 8 ಸಾವಿರ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕಳೆದ ಜನವರಿಯಿಂದ ಉದ್ಯೋಗ ಕಳೆದುಕೊಂಡ ಟೆಕಿಗಳ ಸಂಖ್ಯೆ 1.24 ಲಕ್ಷಕ್ಕೆ ಏರಿಕೆಯಾಗಿದೆ. ಈ ನೌಕರರು ವಿಶ್ವಾದ್ಯಂತ ಇರುವ 384 ವಿವಿಧ ಕಂಪನಿಗಳಿಗೆ ಸೇರಿದವರಾಗಿದ್ದಾರೆ.



ಇಂಟೆಲ್‌ ಕಂಪನಿ 1500, ಮೈಕ್ರೋಸಾಫ್ಟ್‌ 1000, ಅಮೆರಿಕ ಮೂಲದ ಯುಕೆಜಿ ಕಂಪನಿ 2200, ಅಮೆರಿಕದ ಇನ್‌ಟ್ಯೂಟ್‌ 1800, ಬ್ರಿಟನ್‌ನ ಡೈಸನ್‌ 1000, ಬೆಂಗಳೂರು ಮೂಲದ ರೇಶಾಮಂಡಿ ತನ್ನ ಶೇ.80, ಪಾಕೆಟ್‌ಎಫ್‌ಎಂ 200, ಅನ್‌ಅಕಾಡೆಮಿ 250, ಚೆನ್ನೈನ ವೇ ಕೂಲ್‌ 200, ಬಂಗೀ ಕಂಪನಿ 220 ನೌಕರರನ್ನು ತೆಗೆದು ಹಾಕಿವೆ. ಇನ್ನಷ್ಟು ಕಂಪನಿಗಳು ವೆಚ್ಚ ಕಡಿತ ಉದ್ದೇಶದಿಂದ ಮುಂಬರುವ ತಿಂಗಳುಗಳಲ್ಲಿ ಸ್ವಯಂ ನಿವೃತ್ತಿ ಸೌಲಭ್ಯ ಕೊಡುವ ಚಿಂತನೆಯಲ್ಲಿವೆ ಎಂದು ವರದಿಗಳು ತಿಳಿಸಿವೆ.