ಚಿನ್ನ-ವಜ್ರಕ್ಕಿಂತಲೂ ದುಬಾರಿ ಸೊತ್ತು ವಶಪಡಿಸಿಕೊಂಡ ಬಿಹಾರ ಪೊಲೀಸರು: ಇದರ ಬೆಲೆ 50ಗ್ರಾಂಗೆ 850 ಕೋಟಿ ರೂ....!



ನವದೆಹಲಿ: ಚಿನ್ನ - ವಜ್ರಕ್ಕಿಂತಲೂ ಅಧಿಕ ಬೆಲೆಬಾಳುವ ಅತ್ಯಮೂಲ್ಯ 50ಗ್ರಾಂ ತೂಕದ ವಿಕಿರಣಶೀಲ ಕ್ಯಾಲಿಫೋರ್ನಿಯಂ ಕಲ್ಲನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 850 ಕೋಟಿ ರೂ. ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ.


ಬಿಹಾರ ಎಸ್‌ಟಿಎಫ್, ಸ್ಪೆಷಲ್ ಆಪರೇಷನ್ ಗ್ರೂಪ್ 7, ಗೋಪಾಲ್‌ಗಂಜ್ ಡಿಐಯು, ಕುಚೈಕೋಟ್ ಪೊಲೀಸ್‌ ಠಾಣೆ ಜಂಟಿ ತನಿಖೆಯ ಭಾಗವಾಗಿ 50 ಗ್ರಾಂ ಅತ್ಯಮೂಲ್ಯವಾದ ವಿಕಿರಣಶೀಲ ವಸ್ತು ಕ್ಯಾಲಿಫೋರ್ನಿಯಂ ಅನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳು ಶಂಕಿತ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 850 ಕೋಟಿ ರೂ. ಆಗಲಿದೆ ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಗಳು. ಈ ಹಿನ್ನೆಲೆಯಲ್ಲಿ ಮೂವರು ಕಳ್ಳಸಾಗಣೆದಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಒಂದು ಗ್ರಾಂ ಕ್ಯಾಲಿಫೋರ್ನಿಯಂನ ಬೆಲೆ 17 ಕೋಟಿ ರೂಪಾಯಿಯಾಗಿದೆ. ವಶಪಡಿಸಿಕೊಂಡಿರುವ ಕ್ಯಾಲಿಫೋರ್ನಿಯಾದ ಮೌಲ್ಯ ಸುಮಾರು 850 ಕೋಟಿ ರೂ.ಗಳಾಗಲಿದೆ. ಇದನ್ನು ಮುಖ್ಯವಾಗಿ ಪರಮಾಣು ಶಕ್ತಿಯ ಉತ್ಪಾದನೆಯಲ್ಲಿ ಮತ್ತು ಮೆದುಳಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಬಂಧಿತ ಮೂವರು ಕಳ್ಳಸಾಗಾಣಿಕೆದಾರರಲ್ಲಿ ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ತಮ್ಮುಹಿ ರಾಮ್ ಪೊಲೀಸ್‌ ಠಾಣೆಯ ಪರ್ಸೌನಿ ಗ್ರಾಮದ ಛೋಟಾಲಾಲ್ ಪ್ರಸಾದ್‌, ಗೋಪಾಲಗಂಜ್ ಗೆ ಸೇರಿದ ಚಂದನ್ ಗುಪ್ತಾ ಮತ್ತು ಚಂದನ್ ರಾಮ್ ಆಗಿದ್ದಾರೆ. ಈ ಮೂವರು ಹಲವು ತಿಂಗಳುಗಳಿಂದ ಈ ವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ವರದಿಯಾಗಿದೆ. ಈ ವಿಷಯ ಪೊಲೀಸರಿಗೆ ತಿಳಿದಿದೆ. ಕೂಡಲೇ ಎಚ್ಚೆತ್ತ ಎಸ್‌ಐಟಿ, ಎಸ್‌ಒಜಿ, ಡಿಐಯು ತಂಡ, ಸ್ಥಳೀಯ ಕುಚೈಕೋಟ್ ಠಾಣೆ ಪೊಲೀಸರು ತಪಾಸಣೆ ನಡೆಸಿ ಯಶಸ್ವಿಯಾಗಿ ಬಂಧಿಸಿದ್ದಾರೆ.


ಕ್ಯಾಲಿಫೋರ್ನಿಯಂ ಮಾದರಿಯನ್ನು ಮದ್ರಾಸ್‌ ಐಐಟಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಪೊಲೀಸರು ಅಣುಶಕ್ತಿ ಇಲಾಖೆಯನ್ನು ಸಹ ಸಂಪರ್ಕಿಸುವ ಪ್ರಕ್ರಿಯೆಯಲ್ಲಿದ್ದಾರೆ.