ಇನ್ಫೋಸಿಸ್‌ಗೆ 32,403 ಕೋಟಿ ಜಿಎಸ್‌ಟಿ ವಂಚನೆ ಆರೋಪ- ಐಟಿ ಇಲಾಖೆಯಿಂದ ಶೋಕಾಸ್ ನೋಟಿಸ್



ಬೆಂಗಳೂರು: ಪ್ರತಿಷ್ಠಿತ ಐಟಿ ಕಂಪೆನಿ ಇನ್ಫೋಸಿಸ್‌ಗೆ 32,403 ಕೋಟಿವರೆಗೆ ಜಿಎಸ್‌ಟಿ ವಂಚನೆ ಆರೋಪದ ಮೇಲೆ ಐಟಿ ಇಲಾಖೆ ಪ್ರೀ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.


ಇನ್ಫೋಸಿಸ್‌ ಲಿ.ನ ಸಾಗರೋತ್ತರ ಶಾಖೆಯ ಕಚೇರಿಗಳಿಂದ ಜುಲೈ 2017ರಿಂದ ಮಾರ್ಚ್ 2022ರ ಅವಧಿಯಲ್ಲಿ ಮಾಡಿರುವ ವೆಚ್ಚಗಳಿಗೆ ಜಿಎಸ್‌ಟಿ ಪಾವತಿಸಲಾಗಿಲ್ಲ ಎಂದು ಬೆಂಗಳೂರಿನ ಐಟಿ ಅಧಿಕಾರಿಗಳು ಆರೋಪಿಸಿದ್ದಾರೆ.


ಶೋಕಾಸ್‌ ನೋಟಿಸ್‌ ಕುರಿತು ಪ್ರತಿಕ್ರಿಯಿಸಿರುವ ಇನ್ಫೋಸಿಸ್ ಸಂಸ್ಥೆ, ಕಂಪೆನಿಯು ಇದೇ ವಿಚಾರದ ಬಗ್ಗೆ ಜಿಎಸ್‌ಟಿ ಇಂಟೆಲಿಜೆನ್ಸ್ ಮಹಾನಿರ್ದೇಶಕರಿಂದ ಪೂರ್ವ ಶೋಕಾಸ್‌ ನೋಟಿಸ್‌ ಅನ್ನು ಸ್ವೀಕರಿಸಿದೆ. ಕಂಪೆನಿಯು ಅದಕ್ಕೆ ಪ್ರತಿಕ್ರಿಯಿಸುವ ಪ್ರಕ್ರಿಯೆಯಲ್ಲಿದೆ. ನಿಯಮಗಳ ಪ್ರಕಾರ, ಅಂತಹ ವೆಚ್ಚಗಳಿಗೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ಕಂಪನಿ ನಂಬುತ್ತದೆ ಎಂದು ಹೇಳಿದೆ.


“ಜಿಎಸ್ಟಿ ಕೌನ್ಸಿಲ್ ಶಿಫಾರಸುಗಳ ಮೇಲೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಹೊರಡಿಸಿದ ಇತ್ತೀಚಿನ ಸುತ್ತೋಲೆಯ ಪ್ರಕಾರ, ಭಾರತೀಯ ಘಟಕಕ್ಕೆ ಸಾಗರೋತ್ತರ ಶಾಖೆಗಳು ಒದಗಿಸುವ ಸೇವೆಗಳು ಜಿಎಸ್ಟಿಗೆ ಒಳಪಡುವುದಿಲ್ಲ" ಎಂದು ಇನ್ಫೋಸಿಸ್ ಹೇಳಿದೆ. ಹಾಗಾಗಿ, "ಇನ್ಫೋಸಿಸ್ ತನ್ನ ಎಲ್ಲಾ ಜಿಎಸ್‌ಟಿ ಬಾಕಿಗಳನ್ನು ಪಾವತಿಸಿದೆ ಮತ್ತು ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ನಿಯಮಗಳಿಗೆ ಸಂಪೂರ್ಣವಾಗಿ ಅನುಸಾರವಾಗಿದೆ" ಎಂದು ಕಂಪೆನಿ ಹೇಳಿದೆ.