ಉಡುಪಿ: ಟಿಟ್ವೆಂಟಿ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ, ತನ್ನ ಅದ್ಭುತ ಕ್ಯಾಚ್ ಮೂಲಕ ಭಾರತಕ್ಕೆ ವಿಶ್ವಕಪ್ ಕಿರೀಟವನ್ನು ತಂದುಕೊಟ್ಟ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ಟಗಾರ ಸೂರ್ಯ ಕುಮಾರ್ ಯಾದವ್ ಅವರು ಪತ್ನಿ ದೇವಿಶಾ ಶೆಟ್ಟಿ ಅವರೊಂದಿಗೆ ಮಂಗಳವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಹೊಸ ಮಾರಿಗುಡಿಯ
ಮಾರಿಯಮ್ಮ ದೇವಿಯ ದರುಶನ ಪಡೆದ ಬಳಿಕ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ದೇವಸ್ಥಾನದ
ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭ ಅವರು ಮುಖಮಂಟಪದ ಶಿಲಾಸ್ತಂಭ ಸಹಿತ ಸ್ವರ್ಣ
ಗದ್ದುಗೆಗೆ ಸ್ವರ್ಣ ಸಮರ್ಪಿಸಿದರು. ದೇಗುಲದ ಅಧಿಕಾರಿಗಳ
ಪ್ರಕಾರ, ಮೂಲತಃ ದಕ್ಷಿಣ
ಕನ್ನಡ ಜಿಲ್ಲೆಯ ಕರಾವಳಿ ಭಾಗದವರಾದ ದೇವಿಶಾ ಶೆಟ್ಟಿ, ಭಾರತ ಟಿ20 ವಿಶ್ವಕಪ್ ಗೆದ್ದರೆ ಪತಿಯೊಂದಿಗೆ ಕಾಪು ಮಾರಿಗುಡಿ
ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹರಕೆ ಹೊತ್ತಿದ್ದರಂತೆ. ಹೀಗಾಗಿ ಇಂದು ದೇಗುಲಕ್ಕೆ ಭೇಟಿ ನೀಡಿ
ಕಾಪು ಮಾರಿಯಮ್ಮ ದೇವಿಗೆ ಮಲ್ಲಿಗೆ ಹೂವಿನ ಮಾಲೆಯನ್ನು ಅರ್ಪಿಸಿ ಅವರ ಕುಟುಂಬಕ್ಕೆ ಆಶೀರ್ವಾದ
ಕೋರಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ದೇವಿಶಾ ಶೆಟ್ಟಿಯವರು, ಸೂರ್ಯಕುಮಾರ್ ಗೆ ಬಿಡುವಿದ್ದರೆ
ಮುಂದಿನ ವರ್ಷ ಪೂಜೆಯ ವೇಳೆ ದೇವಸ್ಥಾನಕ್ಕೆ ಬರುವುದಾಗಿ ತಿಳಿಸಿದರು.
ಇದೇ ವೇಳೆ ಸೂರ್ಯಕುಮಾರ್ ಯಾದವ್ ದಂಪತಿ ದೇವಸ್ಥಾನದಲ್ಲಿ ತುಳು ಮಾತನಾಡಿ ಗಮನ ಸೆಳೆದಿದ್ದಾರೆ. ಯಾದವ್ ಕೂಡ ತುಳುವಿನಲ್ಲಿ ಮಾತನಾಡಲು ಯತ್ನಿಸಿದ್ದು ದೇವಸ್ಥಾನದ ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದೆ. ಉಡುಪಿಗೆ ಭೇಟಿ ನೀಡಿರುವ ಸೂರ್ಯಕುಮಾರ್ ಯಾದವ್ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ 10 ಭರ್ಜರಿ ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ ಒಟ್ಟು 199 ರನ್ ಬಾರಿಸಿದ್ದರು. ಅದರಲ್ಲೂ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ದಾಖಲಿಸಿತ್ತು. ಈ ಸಂಭ್ರಮದ ನಡುವೆ ಸೂರ್ಯಕುಮಾರ್ ಉಡುಪಿಗೆ ಬಂದು ತಮ್ಮ ಹರಕೆ ತೀರಿಸಿರುವುದು ವಿಶೇಷವಾಗಿದೆ.
Social Icons