ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಜನನಾಂಗವನ್ನೇ ಕುಯ್ದು ಹಾಕಿದ್ಲು ವೈದ್ಯೆ Video



ಪಟ್ನಾ: ಮದುವೆಯಗಲು ನಿರಾಕರಿಸಿದ್ದಾರೆಂದು ಯುವತಿಯರನ್ನು ಭೀಕರವಾಗಿ ಹತ್ಯೆಗೈದ, ಆ್ಯಸಿಡ್ ಎರಚಿರುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಆದರೆ, ಮದುವೆಯಾಗಲು ನಿರಾಕರಿಸಿದನೆಂಬ ಕಾರಣಕ್ಕೆ ವೈದ್ಯರೊಬ್ಬರು ತನ್ನ ಪ್ರಿಯಕರನ ಜನನಾಂಗವನ್ನೇ ಕತ್ತರಿಸಿರುವ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ. ಇದರ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಹಾರದ ಸರನ್ ಜಿಲ್ಲೆಯ ಮಧುರಾನಗರದ ನಿವಾಸಿ ವೇದ್ ಪ್ರಕಾಶ್ (30) ಗಾಯಾಳು. ಈತ 12ನೇ ವಾರ್ಡಿನ್ ಕೌನ್ಸಿಲರ್ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೈದ್ಯೆ ಅಭಿಲಾಷಾ (26)ಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೌನ್ಸಿಲರ್ ವೇದ್‌ ಪ್ರಕಾಶ್ ನೋವಿನಿಂದ ಬೆಡ್ ಮೇಲೆ ನರಳಾಡುತ್ತಿದ್ದನ್ನು ವೀಡಿಯೋದಲ್ಲಿ ಕಾಣಬಹುದು. ವೈದ್ಯೆ ಅಭಿಲಾಷ ಜೋರಾಗಿ ಅಳುತ್ತಾ ಮದುವೆಗೆ ನಿರಾಕರಿಸಿದ್ದಕ್ಕಾಗಿ ನಾನು ಹೀಗೆ ಮಾಡಬೇಕಾಯಿತು ಎಂದು ಹೇಳುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಪರ- ವಿರೋಧದ ಚರ್ಚೆ ನಡೆಯುತ್ತಿದೆ.

ಘಟನೆಯ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಸಂತ್ರಸ್ತ ವೇದ್ ಪ್ರಕಾಶ್ ಹಾಗೂ ಅಭಿಲಾಷಾ 12 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಲಿವ್ ಇನ್ ರಿಲೇಷನ್‌ಶಿಪ್ ನಲ್ಲಿದ್ದರು. ಈ ನಡುವೆ ವೇದ ಪ್ರಕಾಶ್ ಮದುವೆಯಾಗುವುದಾಗಿ ನಂಬಿಸಿ ಅಭಿಲಾಷಾಳೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದ.  ಬಳಿಕ ಆಕೆಯೊಂದಿಗೆ ಅಂತರ ಕಾಯ್ದುಕೊಂಡಿದ್ದ. ಮದುವೆಯಾಗಲು ಸತಾಯಿಸುತ್ತಿದ್ದ ವೇದ್‌ನ ನಡೆಯಿಂದ ಕೋಪಗೊಂಡ ಅಭಿಲಾಷಾ ಪ್ರಿಯಕರನನ್ನು ಮನೆಗೆ ಕರೆಸಿ ಆತನ ಜನನಾಂಗವನ್ನೇ ಕತ್ತರಿಸಿದ್ದಾಳೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಗಾಯಾಳು ನೀಡುವ ಹೇಳಿಕೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.