UDUPI ಹುಚ್ಚು ನಾಯಿ ಕಡಿತ - ಎಂಟು ಮಂದಿಗೆ ಗಾಯ

ಉಡುಪಿ : ಹುಚ್ಚು ನಾಯಿಯೊಂದು ಎಂಟು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಉಡುಪಿ ನಗರ ಮಾರುತಿ ವಿಥಿಕಾದಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ತೀರಾ ಬಸವಳಿದ ಸ್ಥಿತಿಯಲ್ಲಿದ್ದ ಈ ನಾಯಿಯು ರಸ್ತೆಯಲ್ಲಿ ಹೋಗುವಾಗ ಎದುರಿಗೆ ಸಿಕ್ಕಿದವರೆಲ್ಲರಿಗೂ ಕಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಕೆಲವರ ಕಾಲಿನ ಮಾಂಸ ಕೂಡ ಕಚ್ಚಿ ತಿಂದಿದೆ ಎನ್ನಲಾಗಿದೆ. ಗಾಯಗೊಂಡ ಎಲ್ಲರು ಉಡುಪಿ ಜಿಲ್ಲಾಸ್ಪತ್ರೆಗೆ ತೆರಳಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಸ್ಥಳೀಯವಲ್ಲದ ಎಲ್ಲಿಂದಲೋ ಬಂದ ಈ ನಾಯಿಗೆ ಹುಚ್ಚು ಹಿಡಿದಿ ರುವುದನ್ನು ಸ್ಥಳೀಯರು ಗಮನಿಸಿದರು. ಹಲವು ಮಂದಿಗೆ ಕಚ್ಚಿ ಕಚ್ಚಿ ತೀರಾ ಸುಸ್ತಾದ ಈ ನಾಯಿಯು ಉಡುಪಿಯ ನಾರ್ತ್ ಶಾಲೆಯ ಆವರಣದಲ್ಲಿ ಬಂದು ಬಿದ್ದಿರುವುದನ್ನು ಸಾರ್ವಜನಿಕರು ಗುರುತಿಸಿದರು. ಈ ಕುರಿತು ಕೂಡಲೇ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. 

ನಿತ್ಯಾನಂದ ಒಳಕಾಡು ತಕ್ಷಣ ನಗರಸಭೆ ಪೌರಾಯುಕ್ತ ರಾಯಪ್ಪ ಹಾಗೂ ಪ್ರಾಣಿದಯಾ ಸಂಘದವರಿಗೆ ಈ ವಿಚಾರವನ್ನು ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಹಾಗೂ ಪ್ರಾಣಿದಯಾ ಸಂಘದ ಮಂಜುಳಾ ಹಾಗೂ ಪೃಥ್ವಿ ಪರಿಶೀಲನೆ ನಡೆಸಿದರು. ತದನಂತರ ಪಶು ವೈದ್ಯರನ್ನು ಕರೆಸಿ ನಾಯಿಗೆ ಚಚ್ಚುಮದ್ದು ನೀಡಿ, ಕ್ರಮ ಜರಗಿಸಲಾಯಿತು ಎಂದು ತಿಳಿದುಬಂದಿದೆ.

ವರದಿ : ಜಯಂತ್ ಉಡುಪಿ