ಚೆನ್ನೈ: ಕಳ್ಳತನ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ನಡೆಯುತ್ತಿರುವ ಅಪರಾಧ ಪ್ರಕರಣ. ಮನೆಯನ್ನು ದೋಚಲು ಬಂದ ಕಳ್ಳರು ಮಾಡುವ ನಾನಾ ಕಸರತ್ತುಗಳನ್ನು ನಾವು ಗಮನಿಸಿರುತ್ತೇವೆ. ಕದಿಯಲು ಬಂದ ಮನೆಯಲ್ಲಿ ಯಾರೂ ಇಲ್ಲ ಎಂದರಂತೂ ಊಟ ಮಾಡಿ, ಅಲ್ಲಿಯೇ ಎಣ್ಣೆ ಹೊಡೆದು ಮಜಾ ಮಾಡುವ ಕಳ್ಳರೂ ಇದ್ದಾರೆ. ಕಳ್ಳರಿಗೆ ಬಡವ ಶ್ರೀಮಂತ ಎಂಬ ಭೇದ ಇರುವುದಿಲ್ಲ. ಅವರಿಗೆ ಬೇಕಿರುವುದು ಹಣ. ಆದರೆ ಎಲ್ಲ ಕಳ್ಳರೂ ಖದೀಮರಲ್ಲ. ಅವರಲ್ಲಿ 'ಹೃದಯವಂತರೂ' ಇರುತ್ತಾರೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ.
ಕೆಲವವರಿಗೆ ಕಳ್ಳತನ ಕಸುಬಾದರೆ, ಇನ್ನು ಕೆಲವರಿಗೆ ಹೊಟ್ಟೆಪಾಡಿನ ಅನಿವಾರ್ಯತೆಯೂ ಆಗಬಹುದು. ಅಂತಹವರಲ್ಲಿ ಯಾರದ್ದೋ ಮನೆಗೆ ಕನ್ನ ಹಾಕಿದಾಗ ಪಾಪಪ್ರಜ್ಞೆಯೂ ಕಾಡುತ್ತದೆ. ತಮಿಳುನಾಡಿನಲ್ಲಿ ಇಂತಹದೇ ಘಟನೆ ನಡೆದಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮೇಗ್ನಾನಪುರಂನ ಸಥಾಂಕುಲಂ ರಸ್ತೆಯಲ್ಲಿರುವ ನಿವೃತ್ತ ಶಿಕ್ಷಕ ದಂಪತಿಯ ಮನೆಯಲ್ಲಿ ಕಿಡಿಗೇಡಿಯೊಬ್ಬ ಕೈಗೆ ಸಿಕ್ಕ ಬೆಲೆಬಾಳುವ ವಸ್ತುಗಳು ಮತ್ತು ನಗದು ಸಮೇತ ಪರಾರಿಯಾಗಿದ್ದಾನೆ. ಆದರೆ ಅದರ ಜತೆಗೆ ಆತ ಅಲ್ಲಿ ಕ್ಷಮಾಪಣೆ ಪತ್ರವೊಂದನ್ನು ಸಹ ಇರಿಸಿದ್ದಾನೆ. ಅಷ್ಟೇ ಅಲ್ಲ, ಕದ್ದ ವಸ್ತುಗಳನ್ನು ಒಂದು ತಿಂಗಳಲ್ಲಿ ವಾಪಸ್ ಕೊಡುವುದಾಗಿಯೂ ತಿಳಿಸಿದ್ದಾನೆ.
ತಮಿಳುನಾಡಿನ ತೂತುಕುಡಿಯ ನಿವೃತ್ತ ಶಿಕ್ಷಕ ದಂಪತಿಗಳಾದ ಚಿತಿರಾಯ್ ಸೆಲ್ವಿನ್ ಮತ್ತು ಅವರ ಪತ್ನಿ ಇಬ್ಬರೂ ಜೂನ್ 17ರಂದು ಮಗನನ್ನು ಭೇಟಿ ಮಾಡಲು ಚೆನ್ನೈಗೆ ತೆರಳಿದ್ದರು. ಮನೆಯಲ್ಲಿ ತಾವು ಇಲ್ಲದೆ ಇರುವಾಗ ಸ್ವಚ್ಛಗೊಳಿಸುವ ಹೊಣೆಯನ್ನು ಕೆಲಸದಾಕೆ ಸೆಲ್ವಿಗೆ ವಹಿಸಿದ್ದರು. ಜೂನ್ 26ರಂದು ಎಂದಿನಂತೆ ಸೆಲ್ವಿ ಮನೆ ಕ್ಲೀನ್ ಮಾಡಲು ಸೆಲ್ವಿನ್ ಅವರ ಮನೆಗೆ ಬಂದಾಗ ಮುಖ್ಯ ಬಾಗಿಲು ತೆರೆದಿರುವುದನ್ನು ಕಂಡು ದಿಗಿಲುಗೊಂಡಿದ್ದಳು. ಕೂಡಲೇ ಆಕೆ ಸೆಲ್ವಿನ್ ಅವರಿಗೆ ಕರೆ ಮಾಡಿ ಕಳ್ಳತನದ ವಿಚಾರ ತಿಳಿಸಿದ್ದಳು. ಚೆನ್ನೈನಲ್ಲಿದ್ದ ಸೆಲ್ವಿನ್ ದಂಪತಿ, ತರಾತುರಿಯಲ್ಲಿ ಊರಿಗೆ ಮರಳಿ ಪರಿಶೀಲನೆ ನಡೆಸಿದಾಗ 60 ಸಾವಿರ ರೂ ನಗದು ಹಣ, 12 ಗ್ರಾಂ ಚಿನ್ನದ ಆಭರಣ ಹಾಗೂ ಒಂದು ಜೋಡಿ ಬೆಳ್ಳಿ ಕಾಲ್ಗೆಜ್ಜೆ ನಾಪತ್ತೆಯಾಗಿರುವುದು ಕಂಡುಬಂದಿತ್ತು.
ಕೂಡಲೇ ಸೆಲ್ವಿನ್
ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಂದು ತಪಾಸಣೆ ನಡೆಸಿದ್ದರು. ಈ ವೇಳೆ ಪೊಲೀಸರಿಗೆ ಕಳ್ಳ ಬಿಟ್ಟು ಹೋಗಿದ್ದಾನೆ ಎನ್ನಲಾದ
ಕ್ಷಮಾಪಣೆ ಪತ್ರವೊಂದು ಕಂಡುಬಂದಿದೆ. ಅದರಲ್ಲಿ ಆತ ಮನೆ ಮಾಲಕರ ಕ್ಷಮೆ ಕೋರಿದ್ದು, ಕದ್ದ ವಸ್ತುಗಳನ್ನು ಇನ್ನು ಒಂದು ತಿಂಗಳಲ್ಲಿ ವಾಪಸ್
ನೀಡುವುದಾಗಿ ಹೇಳಿದ್ದಾನೆ. ಜತೆಗೆ ತನ್ನ ಕಳ್ಳತನಕ್ಕೆ ಮಾನವೀಯ ಕಾರಣವೊಂದನ್ನು ನೀಡಿದ್ದಾನೆ. 'ನನ್ನನ್ನು ಕ್ಷಮಿಸಿ. ಇದನ್ನು ಇನ್ನು ಒಂದು ತಿಂಗಳಲ್ಲಿ
ವಾಪಸ್ ನೀಡುತ್ತೇನೆ. ನನ್ನ ಮನೆಯಲ್ಲಿ ಒಬ್ಬರಿಗೆ ಅನಾರೋಗ್ಯ ಇರುವ ಕಾರಣ ಹೀಗೆ ಮಾಡುತ್ತಿದ್ದೇನೆ' ಎಂದು ಪತ್ರ ಬರೆದಿಟ್ಟು ಹೋಗಿದ್ದಾನೆ. ಈ ಘಟನೆಯ ಬಗ್ಗೆ ತಿಳಿದವರು
ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
Social Icons