ಇದ್ಯಾವ ಕಾಲ ಬಂತಪ್ಪಾ?!! | ಕೈದಿಗೆ Taj Mahal ತೋರಿಸಲು ಕರೆದುಕೊಂಡು ಬಂದ ಪೊಲೀಸರು..!!

ನವದೆಹಲಿ: ಆಗ್ರಾದ ತಾಜ್ ಮಹಲ್ ಪ್ರೇಮಿಗಳ ಪ್ರೀತಿಯ ದ್ಯೋತಕ. ಇದನ್ನು ನೋಡಲು ಪ್ರೇಮಿಗಳು, ದಂಪತಿ ಬರುವುದು ಸಾಮಾನ್ಯ. ಆದರೆ ಪೊಲೀಸರು ಕೈದಿಯನ್ನು ಕರೆತಂದರೆ ಹೇಗಿರಬಹುದು? ಇಂತಹ ವಿಲಕ್ಷಣ ಘಟನೆಯೂ ನಡೆದಿದೆ. ಹರ್ಯಾಣ ಪೊಲೀಸ್‌ನ ಮೂವರು ಅಧಿಕಾರಿಗಳು ಕೈದಿಯನ್ನು ಜೀಪ್‌ನಲ್ಲಿ ಹಾಕಿಕೊಂಡು ತಾಜಮಹಲ್‌ ನೋಡಲು ಕರೆದುಕೊಂಡು ಬಂದಿದ್ದಾರೆ.



ಜು.23ರಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಆಗ್ರಾದಲ್ಲಿನ ಕೋರ್ಟ್‌ಗೆ ಕೈದಿ ಹಾಜರಾಗಬೇಕಿತ್ತು. ಪೊಲೀಸ್‌ ಅಧಿಕಾರಿಗಳು ಆತನನ್ನು ಕರೆದುಕೊಂಡು ಆಗ್ರಾಕ್ಕೆ ಬಂದಿದ್ದರು. ಈ ವೇಳೆ ಪೊಲೀಸ್‌ ಅಧಿಕಾರಿಗಳು ಹಾಗೂ ಕೈದಿಯ ನಡುವೆ ಅದ್ಭುತವಾಗಿ ಕೆಮೆಸ್ಟ್ರಿ ಬೆಳೆದಿದೆ. ಕೈದಿ ಹೇಳಿದ ಮಾತಿಗೆಲ್ಲಾ ತಲೆ ಅಲ್ಲಾಡಿಸುತ್ತಾ ಹರ್ಯಾಣದಿಂದ ಆಗ್ರಾಕ್ಕೆ ಬಂದಿದ್ದಾರೆ. ಆಗ್ರಾಕ್ಕೆ ಬಂದ ಬಳಿಕ ಕೈದಿಗೆ ತಾಜ್‌ಮಹಲ್‌ ನೋಡಬೇಕು ಎನ್ನುವ ಮನಸ್ಸಾಗಿದೆ. ತಮ್ಮ ವಶದಲ್ಲಿರುವ ವೇಳೆ ಆತ್ಮೀಯವಾಗಿದ್ದ ಕಾರಣಕ್ಕೆ ಪೊಲೀಸರು ಸೀದಾ ಜೀಪ್‌ಅನ್ನು ತಾಜ್‌ಮಹಲ್‌ ಕಡೆಗೆ ತಿರುಗಿಸಿದ್ದಾರೆ. ಕೈದಿಯ ಕೈಗಳಿಗೆ ಪೊಲೀಸರು ಬೇಡಿ ಹಾಕಿ ಆಗ್ರಾಕ್ಕೆ ಕರೆದುಕೊಂಡು ಬಂದು ತಾಜ್‌ಮಹಲ್‌ ಕಟ್ಟಡದ ಸೌದರ್ಯವನ್ನು ತೋರಿಸಿದ್ದಾರೆ.

ತಾಜ್‌ಮಹಲ್‌ನ ಪೂರ್ವದ ಗೇಟ್‌ನಲ್ಲಿದ್ದ  ಸಿಐಎಸ್‌ಎಫ್‌ ಭದ್ರತಾ ಅಧಿಕಾರಿಗಳು ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಮೂರು ಪೊಲೀಸ್‌ ಅಧಿಕಾರಿಗಳು ಕೈದಿಯ ಜೊತೆ ತಿರುಗಾಡುತ್ತಿರುವುದನ್ನು ಕಂಡಿದ್ದಾರೆ. ಆರೋಪಿಯನ್ನು ಈ ರೀತಿ ಕರೆದುಕೊಂಡು ಬಂದಿರುವುದು ಸರಿಯಲ್ಲ ಎಂದು ಭದ್ರತಾ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಪೊಲೀಸರು, ಅಗತ್ಯವಿದ್ದಲ್ಲಿ ಕೈದಿಗೂ ಕೂಡ ನಾವು ಟಿಕೆಟ್‌ ಪಡೆದುಕೊಂಡೆ ಒಳಗೆ ಹೋಗುತ್ತೇವೆ ಎಂದು ತಳಿಸಿದ್ದಾರೆ. ಆದರೆ, ನಿಯಮದ ಕಾರಣ ನೀಡಿ ಭದ್ರತಾ ಅಧಿಕಾರಿಗಳು ಇದಕ್ಕೆ ಅವಕಾಶ ನೀಡಲಿಲ್ಲ.

ಇದಾದ ಬಳಿಕ ಅಲ್ಲಿದ್ದವರು ಕೈದಿ ಹಾಗೂ ಪೊಲೀಸರ ವಿಡಿಯೋ ಮಾಡಲಾರಂಭಿಸಿದರು. ಕೈದಿಯನ್ನು ಕರೆದುಕೊಂಡು ತಾಜ್‌ಮಹಲ್‌ ನೋಡಲು ಬಂದ ಪೊಲೀಸರು ಎಂದು ಸುದ್ದಿ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಕೈದಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಪೊಲೀಸ್‌ ಇಲಾಖೆಯ ಗಮನಕ್ಕೂ ಬಂದಿದೆ. ಇದೀಗ ಈ ವಿಡಿಯೋಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರ ಹೇಳಿಕೆಯೂ ಹೊರಬಿದ್ದಿದೆ. ಪೊಲೀಸರ ಮಾಹಿತಿ ಪಡೆದ ಬಳಿಕ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಎಸ್‌ಪಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.