ಬೆಂಗಳೂರು: ಜೂ.29ರಂದು ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ದಕ್ಷಿಣ ಆಫ್ರಿಕಾ ಎದುರು ಜೂನ್ 29ರಂದು ಬಾರ್ಬೆಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಹಲವು ವಿಶೇಷ ಸನ್ನಿವೇಶಗಳಿಗೆ ಕಾರಣವಾಗಿತ್ತು. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಂದ್ಯದಲ್ಲಿ ಭರ್ಜರಿ ಗೆಲುವಿನ ಬಳಿಕ ಪಿಚ್‌ನ ಹುಲ್ಲು ತಿಂದು ಸಂಭ್ರಮಿಸಿದ್ದರು. ಈ ವಿಚಾರ ಬಹಳಷ್ಟು ವೈರಲ್ ಆಗಿತ್ತು. ಆದರೆ ಯಾಕೆ ಹುಲ್ಲು ತಿಂದಿದ್ದಾರೆ ಎನ್ನುವುದು ತಿಳಿದಿರಲಿಲ್ಲ. ಆದರೆ ಈಗ ತಾನು ಹುಲ್ಲು ತಿಂದಿದ್ದು ಯಾಕೆ ಎನ್ನುವುದನ್ನು ರೋಹಿತ್ ಶರ್ಮಾ ಬಹಿರಂಗ ಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್
ಕೌನ್ಸಿಲ್ ರೋಹಿತ್ ಹುಲ್ಲು ತಿಂದ ವಿಡಿಯೋವನ್ನು ತನ್ನ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ
ಹಂಚಿಕೊಂಡಿತ್ತು. ಈಗ ಕ್ಯಾಪ್ಟನ್ಸ್
ಫೋಟೋ ಶೂಟ್‌ನಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಾತನಾಡಿರುವ ರೋಹಿತ್ ಪಿಚ್‌ನ ಹುಲ್ಲು
ತಿಂದಿದ್ದೇಕೆ? ಎಂದು ವಿವರಿಸಿದ್ದಾರೆ. ತಮ್ಮ
ಜೀವನದುದ್ದಕ್ಕೂ ಸ್ಮರಿಸಿಕೊಳ್ಳುವಂತಹ ಗೆಲುವನ್ನು ಕೊಟ್ಟ ಪಿಚ್‌ಗೆ ಗೌರವ ಕೊಡುವ ನಿಟ್ಟಿನಲ್ಲಿ
ತಾವು ಅದರ ಹುಲ್ಲು ತಿಂದಿದ್ದಾಗಿ ಹಿಟ್‌ಮ್ಯಾನ್ ಹೇಳಿಕೊಂಡಿದ್ದಾರೆ. ಆ ಪಿಚ್‌ನ ಅಂಶ ತಮ್ಮೊಳಗೆ
ಶಾಶ್ವತವಾಗಿ ಉಳಿದುಕೊಳ್ಳಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾಗಿ ಹೇಳಿದ್ದಾರೆ. ಈ
ಸಂಗತಿಗಳನ್ನು ನಾನು ಏಕೆ, ಹೇಗೆ ಎಂದೆಲ್ಲಾ ವಿವರಿಸಲು
ಸಾಧ್ಯವಿಲ್ಲ. ಏಕೆಂದರೆ ಇದೇ ರೀತಿ ನಡೆಯುತ್ತದೆ ಎಂದು ಮೊದಲೇ ಯಾರೂ ಬರೆದಿಟ್ಟಿರುವುದಿಲ್ಲ. ಪಿಚ್
ಬಳಿ ಹೋದಾಗ ಆ ಪಿಚ್‌ನಿಂದ ಈ ಗೆಲುವು ಸಾಧ್ಯವಾಯಿತು ಎಂಬ ಅನುಭವವಾಯಿತು. ಹೀಗಾಗಿ ಆ ಪಿಚ್, ಆ ಕ್ರೀಡಾಂಗಣವನ್ನು ನಾನು ನನ್ನ ಜೀವನದುದ್ದಕ್ಕೂ ಸ್ಮರಿಸುತ್ತೇನೆ.
ಇದೇ ಕಾರಣಕ್ಕೆ ಆ ಪಿಚ್‌ನ ಒಂದು ಭಾಗವನ್ನು ನನ್ನೊಳಗೆ ಸೇರಿಸಿಕೊಳ್ಳಲು ಬಯಸಿದೆ. ಅದರ ಒಂದು ಭಾಗ ನನ್ನದಾಗಬೇಕೆಂದು ಆ ರೀತಿ ಮಾಡಿದೆ ಎಂದು ತಮ್ಮೊಳಗಿನ ಭಾವನೆಯನ್ನು ರೋಹಿತ್ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಈ ಕನಸನ್ನು ನನಸನ್ನಾಗಿಸಿಕೊಳ್ಳಲು ಹಲವು ವರ್ಷಗಳ ಕಾಲ ಕಾದಿದ್ದೇವೆ. ಒಂದು ತಂಡವಾಗಿ ಈ
ಸಲುವಾಗಿ ಬಹಳಷ್ಟು ಕಷ್ಟಪಟ್ಟಿದ್ದೇವೆ. ಈಗ ವಿಶ್ವಕಪ್ ಗೆಲುವು ಸಾಧ್ಯವಾಗಿರುವುದು ತೃಪ್ತಿ ತಂದುಕೊಟ್ಟಿದೆ.
ಕಷ್ಟ ಪಟ್ಟು ಒಂದನ್ನು ಸಂಪಾದಿಸಿದಾಗ ಅದರಿಂದ ಆಗುವ ಅನುಭವವೇ ಬೇರೆ ಎಂದು ರೋಹಿತ್ ಹೇಳಿದ್ದಾರೆ.
ಅಂದಹಾಗೆ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿಗೆ
ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ
ಬಹಳಷ್ಟು ಬೇಸರ ತರಿಸಿದೆ. ಆದರೆ ವಿಶ್ವಕಪ್ ತಂದ ಸಂಭ್ರಮ ರೋಹಿತ್ ಮೇಲಿನ ಅಭಿಮಾನವನ್ನು
ಶಾಶ್ವತವಾಗಿರಿಸಿದೆ.
Social Icons