ಅಜ್ಜಿಯನ್ನು ಉಳಿಸಲು ಜೀವದ ಹಂಗು ತೊರೆದು ನದಿಗೆ ಹಾರಿದ ಕೆಎಸ್ಆರ್‌ಟಿಸಿ ಚಾಲಕ - ಬದುಕಿ ಬರಲಿಲ್ಲ ಹಿರಿಜೀವ



ಹಾವೇರಿ: ತುಂಬಿದ ನದಿಗೆ ಹಾರಿದ ವೃದ್ಧೆಯೊಬ್ಬರನ್ನು ರಕ್ಷಿಸಲು ಕೆಎಸ್‌ಆರ್‌ಟಿಸಿ ಬಸ್ ಅನ್ನೇ ನಿಲ್ಲಿಸಿ ಚಾಲಕ ನದಿಗೆ ಹಾರಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಬಳಿ ನಡೆದಿದೆ.


ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ಕುಮದ್ವತಿ ನದಿಗೆ  ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಾರೆ. ಅದೇ ವೇಳೆ ಮಜೀದಸಾಬ್ ಗುಬ್ಬಿ ಎಂಬ ಕೆಎಸ್‌ಆರ್‌ಟಿಸಿ ಡ್ರೈವರ್ ರಟ್ಟಿಹಳ್ಳಿಯಿಂದ ಹಿರೇಕೆರೂರಿಗೆ ಬಸ್ ಓಡಿಸಿಕೊಂಡು ಹೋಗುತ್ತಿದ್ದರು.


ವೃದ್ದೆ ನೀರಿಗೆ ಜಿಗಿದಿದ್ದನ್ನು ಗಮನಿಸಿದ ಚಾಲಕ ಕೂಡಲೇ ಚಾಲಕ ಬಸ್‌ಅನ್ನು ನಿಲ್ಲಿಸಿ ಅಜ್ಜಿಯನ್ನು ಕಾಪಾಡಲು ಜೀವದ ಹಂಗು ತೊರೆದು ಜಿಗಿದಿದ್ದಾರೆ. ಈಜಿಕೊಂಡು ಹೋಗಿ ಅಜ್ಜಿಯ ದೇಹವನ್ನು ನದಿಯ ದಂಡೆಗೆ ಎಳೆದುಕೊಂಡು ಬಂದಿದ್ದಾರೆ. ಕೂಡಲೇ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


ಇನ್ನೂ ಜೀವದ ಹಂಗು ತೊರೆದು ಅಜ್ಜಿಯನ್ನು ಕಾಪಾಡಲು ನದಿಗೆ ಹಾರಿದ ಡ್ರೈವ‌ರ್ ಮಜೀದಸಾಬ್ ಗುಬ್ಬಿಯವರ ಪ್ರಯತ್ನಕ್ಕೆ ಜನರು ಹಾಗೂ ಪ್ರಯಾಣಿಕರು ಮೆಚ್ಚುಗೆ ಸೂಚಿಸಿದ್ದು, ಮಜೀದಸಾಬ್ ನದಿಗೆ ಜಿಗಿದಾಗ ಅವರ ಅಜ್ಜಿಯನ್ನುಳಿಸುವ ಪ್ರಯತ್ನಕ್ಕೆ ಪ್ರಯಾಣಿಕರು ಸಹ ಸಾಥ್ ನೀಡಿದ್ದಾರೆ. ಮಜೀದಸಾಬ್‌ ಅವರ ಮೆರೆದ ಮಾನವೀಯತೆಗೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಆತ್ಮಹತ್ಯೆಗೆ ಮುಂದಾದ ವೃದ್ಧೆ ಯಾರು ಏನು ಎಂಬುದು ಸ್ಪಷ್ಟವಾಗಿಲ್ಲ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲೆಗೊಂಡಿದ್ದು, ಅಜ್ಜಿಯ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.