ಹಾಸನ SP ಕಚೇರಿ ಆವರಣದಲ್ಲೇ ಕೊಲೆ| ತನ್ನ ಪತ್ನಿಯನ್ನೇ ಇರಿದು ಕೊಂದ ಪೊಲೀಸ್ ಕಾನ್ ಸ್ಟೇಬಲ್

ಹಾಸನ: ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆಯೇ ನೆತ್ತರು ಹರಿದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಎಸ್ಪಿಗೆ ದೂರು ನೀಡಲು ಬಂದ ಪತ್ನಿಯನ್ನೇ ಪೊಲೀಸ್ ಕಾನ್‌ಸ್ಟೆಬಲ್‌ ಓರ್ವ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಾಸನವನ್ನು ಬೆಚ್ಚಿ ಬೀಳಿಸಿದೆ.


ಹಾಸನ ನಗರ ಠಾಣೆಯ ಕಾನ್‌ಸ್ಟೆಬಲ್‌ ಲೋಕನಾಥ್ ತಮ್ಮ ಪತ್ನಿ ಮಮತಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಲೋಕನಾಥ್ ಮತ್ತು ಮಮತಾ ಮಧ್ಯೆ
4-5 ದಿನಗಳಿಂದ ಜಗಳ ನಡೆದಿತ್ತು. ಇಂದು ಪತಿ ವಿರುದ್ಧ ದೂರು ನೀಡಲು ಎಸ್‌ಪಿ ಕಚೇರಿಗೆ ಪತ್ನಿ ಮಮತಾ ಬಂದಿದ್ದಾರೆ. ಪತ್ನಿ ತನ್ನ ವಿರುದ್ಧ ದೂರು ನೀಡಲು ಬರುತ್ತಿರುವುದನ್ನು ಗಮನಿಸಿದ ಲೋಕನಾಥ್‌ ಆವರಣದಲ್ಲೇ ಮಮತಾ ಎದೆಗೆ ಚೂರಿ ಇರಿದಿದ್ದಾನೆ. ಮಮತಾ ಅವರನ್ನು ಚಾಕುವಿನಿಂದ ಇರಿದಿದ್ದನ್ನು ಕಂಡ ಪೊಲೀಸರು, ತಕ್ಷಣವೇ ಹಿಮ್ಸ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು.

ಲೋಕನಾಥ್ ಹಾಗೂ ಮಮತಾ ಇಬ್ಬರಿಗೂ 17 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಕಳೆದ ನಾಲ್ಕೈದ ದಿನದಿಂದಲೂ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ದಂಪತಿಗಳು ಆಗಾಗ್ಗೆ ವಿವಿಧ ವಿಷಯಗಳಿಗೆ ಪರಸ್ಪರ ಜಗಳವಾಡುತ್ತಿದ್ದರು ಮತ್ತು ಸಂಬಂಧಿಕರು ಅವರ ನಡುವೆ ಮಾತುಕತೆ ನಡೆಸಿದರು. ಆದರೆ ಅದು ವಿಫಲವಾಗಿತ್ತು. ಇಂದು ಕೂಡ ದಂಪತಿಗಳು ಭೂವಿವಾದ ಸಂಬಂಧ ಪರಸ್ಪರ ಜಗಳವಾಡಿದ್ದು ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಹೊಡೆದಿದ್ದಾರೆ. ಹೀಗಾಗಿ ಪತಿ ಲೋಕನಾಥ್ ವಿರುದ್ಧ ಎಸ್ ಪಿಗೆ ದೂರು ನೀಡಲು ಮಮತಾ ಮುಂದಾಗಿದ್ದರು. ಈ ವಿಚಾರ ತಿಳಿದ ಲೋಕನಾಥ್ ಆಕೆಯನ್ನು ಮನೆಯಿಂದ ಬೈಕ್ನಲ್ಲಿ ಮಮತಾಳನ್ನು ಹಿಂಬಾಲಿಸಿಕೊಂಡು ಬಂದಿದ್ದ. ಪತ್ನಿ ಎಸ್ ಪಿ ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಅಕೆಯನ್ನು ಮನಸೋ ಇಚ್ಛೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಪತ್ನಿಯನ್ನು ಹತ್ಯೆ ಮಾಡಿದ ನಂತರ ಪರಾರಿಯಾಗಿದ್ದ ಲೋಕನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.