ಶಿರೂರು ದುರಂತ: ಗಂಗಾವಳಿ ನದಿಯಲ್ಲಿ ಟ್ರಕ್ ಇರುವ ಸ್ಥಳ ಪತ್ತೆ| Rescue Operation ತೀವ್ರ

ಶಿರೂರು: ಶಿರೂರಿನಲ್ಲಿ ಕಳೆದ ವಾರ ಸಂಭವಿಸಿದ್ದ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಅರ್ಜುನ್‌ಗಾಗಿ ಕೇರಳ ಮತ್ತು ಕರ್ನಾಟಕದ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಶೋಧ ಕಾರ್ಯಾಚರಣೆಯೂ ಭರದಿಂದ ನಡೆಯುತ್ತಿದೆ. ಇದೀಗ ಗಂಗಾವಳಿ ನದಿಯಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ಕರ್ನಾಟಕ ಸರ್ಕಾರ ಖಚಿತಪಡಿಸಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಕ್ಸ್ (ಟ್ವಿಟರ್) ನಲ್ಲಿ ಮಾಹಿತಿ ನೀಡಿದ್ದು, 'ಒಂದು ಟ್ರಕ್ ನೀರಿನಲ್ಲಿರುವುದು ಪತ್ತೆಯಾಗಿದೆ. ನೌಕಾಪಡೆಯ ಡೀಪ್ ಡೈವರ್‌ಗಳು ಶೀಘ್ರದಲ್ಲೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ನದಿಯಿಂದ ಮೇಲೆತ್ತಲಿದ್ದಾರೆ. ಅಂತೆಯೇ ನದಿಯಲ್ಲಿನ ಹೂಳೆತ್ತಲು ಲಾಂಗ್ ಆರ್ಮ್ ಬೂಮರ್ ಅಗೆಯುವ ಯಂತ್ರವನ್ನು ಬಳಸಲಾಗುವುದು ಎಂದು ತಿಳಿಸಿದ್ದಾರೆ.



ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್‌ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ (Intelligent Underground Buried Object Detection system) ಸಿಸ್ಟಮ್ ಅನ್ನು ಸಹ ಹುಡುಕಾಟಕ್ಕಾಗಿ ನಿಯೋಜಿಸಲಾಗಿದೆ. ಕೋಸ್ಟ್ ಗಾರ್ಡ್ ನೀರಿನಲ್ಲಿ ನಾಪತ್ತೆಯಾದ ದೇಹಗಳಿಗಾಗಿ ಹೆಲಿಕಾಪ್ಟರ್ ಹುಡುಕಾಟ ನಡೆಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಯಿಂದ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ದಳಕ್ಕೆ ಮಹತ್ವದ ನೆರವು ಸಿಕ್ಕಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಮತ್ತು ಅವರ ತಂಡದ ಸಂಘಟಿತ ಪ್ರಯತ್ನದಿಂದಾಗಿ ಟ್ರಕ್ ಇರುವ ಸ್ಥಳವನ್ನುಗುರುತಿಸಲು ಸಾಧ್ಯವಾಗಿದೆ. ಎಸ್ಪಿ ನಾರಾಯಣ್ ಅವರು ನಾಸಾದ ಸ್ನೇಹಿತರಿಗೆ ವಿವರಗಳನ್ನು ಕಳುಹಿಸಿದ್ದರು. ಅವರು ಈ ಪ್ರದೇಶದ ಚಾರ್ಟ್ ಅನ್ನು ಒದಗಿಸಿದ್ದಾರೆ. ಇದನ್ನು ISRO ನೊಂದಿಗೆ ಹಂಚಿಕೊಂಡು, ಈ ಚಿತ್ರಗಳನ್ನು ವಿಶ್ಲೇಷಿಸಿ ಟ್ರಕ್ ಇರುವ ಸ್ಥಳವನ್ನು ಇಸ್ರೋ ದೃಢಪಡಿಸಿದೆ. ಬೂಮ್ ಬ್ಯಾರಿಯರ್ ಮತ್ತು ಕ್ರೇನ್ ಮೂಲಕ ಅವಶೇಷಗಳನ್ನು ತೆಗೆದುಹಾಕುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಅಂತೆಯೇ ನಾಸಾ, ಇಸ್ರೋ ನಿರ್ದೇಶನಗಳ ಆಧಾರದ ಮೇಲೆ, ನದಿಯಲ್ಲಿನ ಸ್ಥಳವನ್ನು ಗುರುತಿಸಲು ನಾವು ಭಾರತೀಯ ನೌಕಾಪಡೆಯಿಂದ ಹೆಲಿಕಾಪ್ಟರ್ ಗಳನ್ನು ನೀಡುವಂತೆ ವಿನಂತಿಸಿದ್ದೇವೆ. ಕಾಪ್ಟರ್ ನೆರವಿನಿಂದ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶವನ್ನು ಗುರುತಿಸಲಾಗುತ್ತದೆ. ನಾವು ನಿಖರವಾದ ಸ್ಥಳದ ಕುರಿತು ಮಾಹಿತಿ ಪಡೆದ ನಂತರ, ನಾವು ಮೃತದೇಹಗಳನ್ನು ಹುಡುಕುವುದನ್ನು ಮುಂದುವರಿಸುತ್ತೇವೆ ಎಂದು ಎಸ್ಪಿ ನಾರಾಯಣ್ ಹೇಳಿದ್ದಾರೆ.

ಕಾರವಾರ ಶಾಸಕ ಸತೀಶ್ ಸೈಲ್ ಮತ್ತು ಮಂಜೇಶ್ವರ ಶಾಸಕ ಅಶ್ರಫ್ ಅವರು ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಭೂಕುಸಿತ ಸ್ಥಳದಲ್ಲಿಯೇ ಇದ್ದಾರೆ. ಟ್ರಕ್ ನ ಚಾಲಕ ಅರ್ಜುನ್ ಜೀವಂತವಾಗಿ ಬರಲಿ ಎಂದು ಜನರು ಹಾರೈಸುತ್ತಿದ್ದಾರೆ.