ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಿರುಸು ಪಡೆದ ಮಳೆ - ಇಂದು, ನಾಳೆ ರೆಡ್ ಅಲರ್ಟ್ ಘೋಷಣೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ನೇತ್ರಾವತಿ ನದಿ



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. 


ಕೆಲವು ದಿನಗಳಿಂದ ಮಳೆ ಕೊಂಚ ಬಿಡುವು ಪಡೆದಿತ್ತು. ಆದರೆ ಸೋಮವಾರದಿಂದ ಮತ್ತೆ ಭಾರೀ ಗಾಳಿ ಮಳೆ ಸುರಿಯಲಾರಂಭಿಸಿದ್ದು ಅರಬ್ಬಿ ಸಮುದ್ರ ಪ್ರಕ್ಷುಬ್ದಗೊಂಡಿದೆ. ಭಾರತೀಯ ಹವಾಮಾನ ಇಲಾಖೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಿದೆ. ಆಗಸ್ಟ್ 1ರಂದು ಆರೆಂಜ್ ಅಲರ್ಟ್,  ಆಗಸ್ಟ್‌ 2ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.


ಸದ್ಯ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಅಪಾಯದ ಮಟ್ಟ 29 ಮೀಟರ್ ಆಗಿದ್ದು, ಇಂದು ನದಿಯು 29.6 ಮೀಟರ್ ನಲ್ಲಿ ಹರಿಯುತ್ತಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ 8.2 ಮೀಟರ್ ನಲ್ಲಿ ಹರಿಯುತ್ತಿದೆ. ಎಎಂಆರ್ ಬ್ಯಾರೇಜ್ ಲೆವೆಲ್ 18.8 ಮೀಟರ್ ಇದ್ದು, 12 ಗೇಟ್‌ಗಳನ್ನು ತೆರೆಯಲಾಗಿದೆ‌.