ಮಂಗಳೂರು: ದ.ಕ.ಜಿಲ್ಲಾ ಶಾಲೆ, ಪಿಯುಸಿ ಕಾಲೇಜಿಗೆ ನಾಳೆಯೂ ರಜೆ



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.16ರಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ , ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ರಜೆಯನ್ನು ಘೋಷಿಸಿದ್ದಾರೆ.

ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ ಶಾಲಾ - ಕಾಲೇಜುಗಳಿಗೆ ಇಂದೂ ರಜೆಯಿತ್ತು. ಹವಾಮಾನ ಇಲಾಖೆ ನಾಳೆಯೂ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆಯೂ ರಜೆ ಘೋಷಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ದುರ್ಬಲ / ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಶಾಲಾ

ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸುವುದು. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸಬೇಕೆಂದು ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ವಿಪರೀತ ಮಳೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿಗಳ/ತೋಡುಗಳ ಮತ್ತು ವಿದ್ಯುತ್ ಕಂಬ/ತಂತಿಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಬೇಕು. ಸಂಭಾವ್ಯ ಹಾನಿಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸಾರ್ವಜನಿಕರು ಅಪಾಯಕಾರಿ ಸನ್ನಿವೇಶಗಳಿಂದ ದೂರವಿದ್ದು, ಜಿಲ್ಲಾಡಳಿತದ ಸಲಹೆ/ಸೂಚನೆಗಳನ್ನು ಪಾಲಿಸುವುದು ಉತ್ತಮ. ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ.