ವರದಿ: ಕವಿತಾ ಕೆ ಮಾಣಿ
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಿ ಪುತ್ತೂರು ತಾಲೂಕು ವತಿಯಿಂದ ವಿವೇಕಾನಂದ ಕಾಲೇಜು ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ, ಉಪಾನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಿತು.
ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಬಳಿಕ ಮಾತನಾಡಿದ ಅವರು ಜವಾಬ್ದಾರಿಯುತ ಮಾಧ್ಯಮದಿಂದ ಸಮಾಜ ಹಾಗೂ ರಾಜಕೀಯ ಬದಲಾವಣೆ ಸಾಧ್ಯ ಎಂದು ಹೇಳಿದ್ರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಸತ್ಯದ ವರದಿಗಳನ್ನು ಪ್ರಕಟಿಸಿದ ಪತ್ರಕರ್ತರು ಹುತಾತ್ಮರಾದ ಘಟನೆಗಳು ನಡೆದಿದೆ. ಸುಳ್ಳು ಸುದ್ದಿಗಳನ್ನು ಹಾಕಿದಾಗ ಸಮಾಜದ ಹಾಗೂ ಕುಟುಂಬದ ಮೇಲೆ ಬಹಳ ಪ್ರಭಾವ ಬೀರುತ್ತದೆ. ಜವಾಬ್ದಾರಿಯುತ ಮಾಧ್ಯಮದಿಂದ ಸಮಾಜದ ಹಾಗೂ ರಾಜಕೀಯ ಬದಲಾವಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಮಾತನಾಡಿ, ನಮ್ಮ ಯೂನಿಯನ್ ಮೂಲಕ ಹಲವು ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ ಅವರು ನಮ್ಮ ಸಂಘದಲ್ಲಿ ವಿವಿಧ ಪತ್ರಿಕೆ, ಟಿ.ವಿ. ಮತ್ತು ವೆಬ್ ಮಾಧ್ಯಮದ ವರದಿಗಾರರು ಸದಸ್ಯರಾಗಿದ್ದಾರೆ. ಈ ಸದಸ್ಯರಿಗೆ ಕಾರ್ಯ ನಿರ್ವಹಿಸಲು ಸ್ಥಳದ ಅವಶ್ಯಕತೆ ಇದೆ. ಹಾಗಾಗಿ ಪತ್ರಿಕಾ ಭವನದಲ್ಲಿ ನಮ್ಮ ಯೂನಿಯನ್ ಸದಸ್ಯರಿಗೆ ಮಾತ್ರವಲ್ಲದೆ ಎಲ್ಲಾ ಪತ್ರಕರ್ತರ ಸಂಘದವರಿಗೂ ಸಮಾನ ಅವಕಾಶ ಸಿಗುವಂತಾಗಬೇಕಿದೆ ಎಂದರು. ನಮ್ಮ ಸದಸ್ಯರಿಗೆ ಸರಕಾರದ ಸವಲತ್ತು ಮತ್ತು ಇನ್ಸೂರೆನ್ಸ್ ವ್ಯವಸ್ಥೆ ಸಿಗುವಂತೆ ಮಾಡಲು ಪ್ರಯತ್ನ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಗಾರಗಳನ್ನು ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.
ದ.ಕ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಮಾತನಾಡಿ ನಕಾರಾತ್ಮಕ ಲೇಖನಗಳನ್ನು ಓದುಗರು ಓದುವುದು ಕಡಿಮೆ ಮಾಡಿದಾಗ ಮತ್ತು ಸಕರಾತ್ಮಕ ಲೇಖನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಸಮಾಜದ ಸ್ವಾಸ್ಥ್ಯ ಉಳಿಯುತ್ತದೆ ಎಂದರು.
ಪತ್ರಿಕಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಗೌರವ ಸಲಹೆಗಾರರಾದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪ್ರೊ.ವಿ.ಬಿ. ಅರ್ತಿಕಜೆ ಮಾತನಾಡಿ ಇತಿಹಾಸ ಪ್ರಾಧ್ಯಾಪಕನಾಗಿರುವ ನಾನು ಪತ್ರಿಕೋದ್ಯಮದಲ್ಲಿ ಕಳೆದ ೪೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಪತ್ರಕರ್ತನಾಗಿ ವೃತ್ತಿಯಿಂದ ರಿಟೈರ್ಡ್ ಆದರೂ ಪ್ರವೃತ್ತಿಯಿಂದ ರಿಟೈರ್ಡ್ ಆಗದ ಹಾಗೆ ಸೇವೆ ನೀಡುತ್ತಿದ್ದೇನೆ ಎಂದರು.
ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರವರು ಪ್ರೊ.ವಿ.ಬಿ ಆರ್ತಿಕಜೆರವರನ್ನು ಸನ್ಮಾನಿಸಿ ಮಾತನಾಡಿ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕಳೆದ ೪೦ ವರ್ಷಗಳಿಂದ ಬರೆಯುತ್ತಿದ್ದೇನೆ. ಸನ್ಮಾನಿತ ಪ್ರೊ.ಅರ್ತಿಕಜೆರವರು ಕೂಡ ಪತ್ರಿಕಾ ಜೀವನದಲ್ಲಿ ೪೦ ವರ್ಷದ ಅನುಭವವನ್ನು ಹೊಂದಿರುವುದು ಕಾಕತಾಳೀಯ. ಓರ್ವ ವೈದ್ಯನಾಗಿದ್ದ ನಾನು ಭ್ರಷ್ಟಾಚಾರದ ವಿರುದ್ಧ ೪೦ ವರ್ಷದ ಹಿಂದೆಯೇ ಹೋರಾಟ ನಡೆಸಿ ಪತ್ರಿಕೆ ಆರಂಭಿಸಿ ಈಗಲೂ ಹೋರಾಟ ಮಾಡುತ್ತಿದ್ದೇನೆ ಎಂದರು.
ಕಹಳೆ ನ್ಯೂಸ್ ಚಾನೆಲ್ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಭಟ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ಸಕರಾತ್ಮಕ ಹಾಗೂ ನಕಾರಾತ್ಮಕ ಹೀಗೆ ಎರಡು ಆಯಾಮಗಳಿದ್ದು ಇದು ಓದುಗನ ಮಾನಸಿಕತ್ವದ ಮೇಲೆ ನಿಂತಿದೆ ಎಂದರು.
ನೆಹರೂನಗರ ವಿವೇಕಾನಂದ ಕಾಲೇಜಿನ ಸಂಚಾಲಕರಾದ ನ್ಯಾಯವಾದಿ ಮುರಳೀಕೃಷ್ಣ ಕೆ.ಎನ್. ಮಾತನಾಡಿ ಪತ್ರಿಕಾ ದಿನಾಚರಣೆ ಸಂದರ್ಭ ಆದರ್ಶ ವ್ಯಕ್ತಿಗೆ ಸನ್ಮಾನ ಮಾಡಿರುವುದು ಶ್ಲಾಘನೀಯ. ಯಾವುದೇ ವರದಿಯನ್ನು ಮಾಡುವಾಗ ಅದು ನಿಖರವಾಗಿರಬೇಕು, ಸತ್ಯವಾಗಿರಬೇಕು, ಪರಾಮರ್ಶೆ ಮಾಡುವಂತಿರಬೇಕು ಎಂದರು.
ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ವೇದವ್ಯಾಸ ರಾಮಕುಂಜ ಹಾಗೂ ಕಾರ್ಯಾಗಾರಕ್ಕೆ ಸಹಕಾರ ನೀಡಿದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ನಿಡ್ಪಳ್ಳಿರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ತಾಲೂಕು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿಣಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಪೆರುವಾಯಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ ಸ್ವಾಗತಿಸಿ ಉಪಾಧ್ಯಕ್ಷೆ ಕವಿತಾ ಮಾಣಿ ವಂದಿಸಿದರು. ಉಪಾಧ್ಯಕ್ಷೆ ಚೈತ್ರಾ ಭೂಷಣ್ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷೆ ಹೇಮಾ ಜಯರಾಂ ಕಾರ್ಯಕ್ರಮ ನಿರೂಪಿಸಿದರು. ಯೂನಿಯನ್ ಜತೆ ಕಾರ್ಯದರ್ಶಿ ಚಿನ್ಮಯಕೃಷ್ಣ, ಕೋಶಾಧಿಕಾರಿ ಪ್ರಜ್ವಲ್ ಕೋಟ್ಯಾನ್, ಕಾರ್ಯಕಾರಿಣಿ ಸದಸ್ಯರಾದ ಜ್ಯೋತಿಪ್ರಕಾಶ್ ಪುಣಚ, ಆದಿತ್ಯ ಈಶ್ವರಮಂಗಲ, ಚಂದ್ರಕಾಂತ್ ಉರ್ಲಾಂಡಿ, ದೀಪಕ್ ಹೊಸ್ಮಠ, ಪ್ರಶಾಂತ್ ಸಿ.ಎಚ್., ಜಯಪ್ರಕಾಶ್ ಬದಿನಾರು, ಜಗದೀಶ್ ಕಜೆ, ಶಶಿಧರ ನೆಕ್ಕಿಲಾಡಿ, ಸುಭಾಶ್ಚಂದ್ರ ಕೆ, ಗುಣಕರ ಏಕ, ಮನ್ಮಥ ಶೆಟ್ಟಿ, ಪ್ರಭಾಕರ ವಿಟ್ಲ, ರಾಜೇಶ್ ವಿಟ್ಲ, ರಕ್ಷಿತಾ ಮತ್ತಿತರರು ಸಹಕರಿಸಿದರು.
ಉದ್ಯಮಿ ಪುರುಷೋತ್ತಮ ಶೆಟ್ಟಿ ನುಳಿಯಾಲು ಮಾಲಕತ್ವದ ಯಮುನಾ ಹೋಮ್ಸ್ ಆಂಡ್ ಡಿಸೈನ್ಸ್, ಯಮುನಾ ಬೋರ್‌ವೆಲ್ಸ್‌ರವರಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ತಾಲೂಕು ಜರ್ನಲಿಸ್ಟ್ ಯೂನಿಯನ್‌ನ ಸದಸ್ಯರಿಗೆ ಉತ್ತಮ ಗುಣಮಟ್ಟದ ಕೊಡೆಗಳನ್ನು ವಿತರಣೆ ಮಾಡಲಾಯಿತು.


Social Icons