ಆನ್ ಲೈನ್, ಒಟಿಪಿ ಆಯ್ತು, ಈಗ Post ಲೆಟರ್ ಮೂಲಕ ವಂಚನೆಯ ಜಾಲ..!!| ಹುಷಾರ್

ಬೆಂಗಳೂರು: ಡಿಜಿಟಲ್ ಯುಗದಲ್ಲಿ ವಂಚನೆ ಪ್ರಕರಣಗಳು ದಿನಕ್ಕೆ ಸಾವಿರದಂತೆ ನಡೆಯುತ್ತಿವೆ. ಅನೇಕ ಬಗೆಯ ಆನ್ ಲೈನ್ ವಂಚನೆಯ ವಿಧಾನಗಳನ್ನು ಅನುಸರಿಸಿದ ಮಂದಿ ಈಗ ಹೊಸ ವಿಧಾನವನ್ನು ಅನುಸರಿಸುತ್ತಿದ್ದಾರೆ. ಈಗ ಮನೆಗೆ ಲಾಟರಿ ಬಹುಮಾನದ ಕೂಪನ್​ ಒಳಗೊಂಡ ಅಂಚೆ ಪತ್ರವನ್ನು ಕಳುಹಿಸುವ ಮೂಲಕ ವಂಚಿಸುವ ಹೊಸ ತಂತ್ರಗಾರಿಕೆಯನ್ನು ದಂಧೆಕೋರರು ಅನುಸರಿಸುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಪೊಲೀಸ್​ ಇಲಾಖೆಯು ಸಲಹೆ ನೀಡಿದೆ.

ಈ ಹೊಸ ವಿಧಾನದ ವಂಚನೆ ಪ್ರಕರಣದಲ್ಲಿ ಅನಧಿಕೃತ ಕಂಪನಿಗಳ ಹೆಸರಿನಲ್ಲಿ ಲಾಟರಿ ಬಹುಮಾನದ ಕೂಪನ್​ ಅಂಚೆ ಪತ್ರಗಳನ್ನು ನೇರವಾಗಿ ಮನೆಗಳಿಗೆ ಕಳುಹಿಸಲಾಗುತ್ತಿದೆ. ಇದನ್ನು ನಂಬಿ, ಅದರಲ್ಲಿನ ಸಲಹೆ ಸೂಚನೆಗಳಂತೆ ನಡೆದುಕೊಂಡಲ್ಲಿ ಬ್ಯಾಂಕ್​ ಖಾತೆಯಲ್ಲಿನ ಹಣವು ಖಾಲಿಯಾಗಿರುತ್ತದೆ. ಈಗಾಗಲೇ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ವಂಚನೆಯ ಪ್ರಕರಣಗಳು ವರದಿಯಾಗಿವೆ.

ಇಲ್ಲಿ ಹೇಗೋ ಜನರ ವಿಳಾಸವನ್ನು ಪಡೆದುಕೊಂಡು ಮನೆಗಳಿಗೆ ನೋಂದಾಯಿತ ಅಂಚೆ ಪತ್ರವನ್ನು ಕಳುಹಿಸಲಾಗುತ್ತದೆ. ಇದನ್ನು ತೆರೆದು ನೋಡಿದಾಗ ಅರ್ಜಿ ನಮೂನೆ, ಕಂಪನಿ ಸವಲತ್ತುಗಳ ಮಾಹಿತಿ ಪುಸ್ತಕ, ಕೂಪನ್​ ಇರುತ್ತದೆ. ಇದರಲ್ಲಿ ಪ್ರಮುಖವಾಗಿ ಲಾಟರಿ ಅದೃಷ್ಟವನ್ನು ಪರಿಶೀಲಿಸಿಕೊಳ್ಳಲು ರಹಸ್ಯವಾಗಿ ಮುದ್ರಿತ ಭಾಗದಲ್ಲಿ ಮೊದಲು ಸ್ಕ್ರಾಚ್​ ಮಾಡಲು, ಬಳಿಕ ಅಲ್ಲಿ ಕಾಣುವ ಬಹುಮಾನದ ಹಣವನ್ನು ಪಡೆಯಲು ಕ್ಯೂರ್​ ಕೋಡ್​ ಸ್ಕಾ$ನ್​ ಮಾಡಲು ಹೇಳಲಾಗಿರುತ್ತದೆ.

ಆಸೆ ಆಮಿಷಗಳನ್ನೊಡ್ಡಿ ನಾನಾ ತಂತ್ರಗಾರಿಕೆಯಲ್ಲಿ ಹಣವನ್ನು ಕದಿಯುವ ವಂಚನೆಯ ಪ್ರಕರಣಗಳು ವ್ಯಾಪಕ ನಡೆಯುತ್ತಿವೆ. ಇದನ್ನು ನಂಬಿ ಅಮಾಯಕ ಜನರು ಮೋಸ ಹೋಗುತ್ತಿದ್ದಾರೆ. ಕೊನೆಗೆ ಪೊಲೀಸ್​ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಜಾಣ ಕುರುಡರಂತೆ ಅಪರಿಚಿತರ ಸಲಹೆ ಸೂಚನೆಗಳನ್ನು ಪಾಲಿಸುವುದು ಇಲ್ಲವೇ ಅನಧಿಕೃತ ವ್ಯಕ್ತಿ ಇಲ್ಲವೇ ಕಂಪನಿಗಳೊಂದಿಗೆ ವ್ಯವಹರಿಸುವುದನ್ನು ಬಿಡಬೇಕು ಎಂದು ಪೊಲೀಸ್​ ಇಲಾಖೆ ಸಲಹೆ ನೀಡಿದೆ.