ಮಂಗಳೂರು: ಎಣ್ಣೆ ನಶೆಯಲ್ಲಿ ಮೋರಿಗೆ ಬಿದ್ದ ವ್ಯಕ್ತಿ - ರಕ್ಷಿಸಿ ಮೇಲಕ್ಕೆತ್ತಿದ ಸಂಚಾರಿ ಪೊಲೀಸರು



ಮಂಗಳೂರು: ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ವ್ಯಕ್ತಿಯೋರ್ವನನ್ನು ಸಂಚಾರಿ ಠಾಣಾ ಪೊಲೀಸರಿಬ್ಬರು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮಂಗಳೂರಿನ ಪಂಪ್‌ವೆಲ್ ಬಳಿ ಶುಕ್ರವಾರ ಬೆಳಗ್ಗೆ 8.30ಸುಮಾರಿಗೆ ನಡೆದಿದೆ.


ಮದ್ಯದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನು ದಾರಿ ಕಾಣದೆ ರಸ್ತೆ ಬಿಟ್ಟು ಮೋರಿಗೆ ಬಿದ್ದಿದ್ದನು. ಆರೇಳು ಅಡಿ ಆಳವಿದ್ದ ಈ ಮೋರಿಯಲ್ಲಿ ಮಳೆಯ ಕಾರಣ ನೀರು ರಭಸವಾಗಿ ಹರಿಯುತ್ತಿದೆ. ಕೊಂಚ ಹೆಚ್ಚು ಕಡಿಮೆಯಾದರೂ ಮೋರಿಗೆ ಬಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋಗುವ ಸಾಧ್ಯತೆಯಿತ್ತು. ಇದನ್ನು ಗಮನಿಸಿದ ಮಂಗಳೂರು ನಗರ ಜೆಪ್ಪಿನಮೊಗರು ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವಿಲ್ಸನ್ ಫೆರ್ನಾಂಡಿಸ್ ಅವರು ಸ್ವತಃ ಮೋರಿಗಿಳಿದು ಹರಸಾಹಪಟ್ಟು ಮೇಲಕ್ಕೆತ್ತಿದ್ದಾರೆ.


ಈ ಸಂದರ್ಭ ಅಲ್ಲಿಯೇ ಇದ್ದ ಸಾರ್ವಜನಿಕರು ಸಹಕರಿಸಿದ್ದಾರೆ. ಈ ಸಂದರ್ಭದ ದೃಶ್ಯವನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಸದ್ಯ 58ಸೆಕೆಂಡ್‌ನ ಈ ವೀಡಿಯೋ ವೈರಲ್ ಆಗುತ್ತಿದೆ. ಪೊಲೀಸರಿಬ್ಬರ ಈ ಕಾರ್ಯಕ್ಕೆ ಎಲ್ಲರೂ ಹ್ಯಾಟ್ಸ್ಆಫ್ ಅನ್ನುತ್ತಿದ್ದಾರೆ.