ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜು.22ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣ ನಡೆದು 29 ದಿನಗಳ ನಂತರ ಈಗ ಸೂರಜ್ ಗೆ ಜಾಮೀನು ಸಿಕ್ಕಿದೆ. ಸೂರಜ್ ವಿರುದ್ಧ ಇಬ್ಬರು ದೂರು ಸಲ್ಲಿಸಿದ್ದರು. ಇದರಲ್ಲಿ ಎರಡೂ ಕೇಸ್ ನಲ್ಲಿ ಜಾಮೀನು ಮಂಜೂರಾಗಿದೆ. ನ್ಯಾ.ಸಂತೋಷ್ ಗಜಾನನ ಭಟ್ ಅವರಿಂದ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಬಿದ್ದಿದೆ.
ಹೊಳೆನರಸೀಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು
ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಕೋರಿ ಸೂರಜ್ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಯ
ವಿಚಾರಣೆ ನಡೆಸಿದ ವಿಶೇಷ ಕೋರ್ಟ್,
ಆದೇಶ ಕಾಯ್ದಿರಿಸಿತ್ತು. ಇಂದು ಎರಡೂ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿ ಆದೇಶ
ಹೊರಡಿಸಿದೆ.
ದೂರುದಾರರಿಗೆ ಮತ್ತು ಸಂತ್ರಸ್ತರಿಗೆ ಬೆದರಿಕೆ ಹಾಕುವಂತಿಲ್ಲ.
ತನಿಖೆಯಿಂದ ತಪ್ಪಿಸಿಕೊಳ್ಳಬಾರದು. ಕರೆದಾಗಲೆಲ್ಲ ವಿಚಾರಣೆಗೆ ಹಾಜರಾಗಬೇಕು. ಪಾಸ್‌ಪೋರ್ಟ್
ಅನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ನ್ಯಾಯಾಲಯದಿಂದ ಲಿಖಿತ ಅನುಮತಿಯನ್ನು ಪಡೆಯದೆ ರಾಜ್ಯ
ಬಿಟ್ಟು ಬೇರೆ ಕಡೆಗೆ ಪ್ರಯಾಣಿಸಬಾರದು. ಸಂತ್ರಸ್ಥನನ್ನು ಯಾವುದೇ ರೀತಿಯಲ್ಲಿ ನೇರವಾಗಿ ಅಥವಾ
ಪರೋಕ್ಷವಾಗಿ ಸಂಪರ್ಕಿಸಬಾರದು. ಪ್ರತಿ ತಿಂಗಳ
ಎರಡನೇ ಭಾನುವಾರ ಬೆಳಿಗ್ಗೆ 9.00 ರಿಂದ
ಸಂಜೆ 5.00 ರವರೆಗೆ 6 ತಿಂಗಳ ಅವಧಿಗೆ
ಹಾಜರಾತಿ ಹಾಕಬೇಕು ಎಂದು ಕೋರ್ಟ್ ಸೂಚಿಸಿದೆ.

Social Icons