ನವದೆಹಲಿ: ಜಾಗತಿಕ ದಿಗ್ಗಜ ಮೈಕ್ರೋಸಾಫ್ಟ್ ವಿಂಡೋಸ್‌ನಲ್ಲಿ ಇಂದು ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ವಿಶ್ವಾದ್ಯಂತದ ಕೋಟ್ಯಂತರ ಬಳಕೆದಾರರು ಪರದಾಡುವಂತಾಗಿತ್ತು. ವಿಮಾನ, ರೈಲು ಸೇವೆ, ಆನ್‌ಲೈನ್ ಬುಕ್ಕಿಂಗ್, ಕಂಪನಿಗಳ ಹತ್ತಾರು ಅಪ್ಲಿಕೇಷನ್‌ಗಳು ಹಾಗೂ ಸಾಫ್ಟ್‌ವೇರ್‌ಗಳಿಗೆ ದಿಢೀರ್ ದಿಗ್ಬಂಧನ ಎದುರಾಗಿತ್ತು. ಮೈಕ್ರೊಸಾಫ್ಟ್ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ಬಳಸುತ್ತಿರುವ ಬಹುತೇಕ ಎಲ್ಲರಿಗೂ ಸಾಫ್ಟ್‌ವೇರ್ ದೋಷ ಕಾಣಿಸಿಕೊಂಡಿದೆ. ಕಂಪ್ಯೂಟರ್‌ನಲ್ಲಿ ನೀಲಿ ಪರದೆ ಕಾಣಿಸಿಕೊಂಡು ಸಮಸ್ಯೆ ಇರುವುದನ್ನು ಸಾರಿ ಹೇಳುತ್ತಿದೆ. ಇದರಿಂದ ಕಂಪ್ಯೂಟರ್‌ಗಳು ರಿಸ್ಟಾರ್ಟ್ ಆಗಿವೆ.
ಇನ್ನು ಮೈಕ್ರೋಸಾಫ್ಟ್ ಸೇವೆಗಳಲ್ಲಿನ ಈ ತಾಂತ್ರಿಕ ಸಮಸ್ಯೆ ವಿಮಾನಯಾನ, ಬ್ಯಾಂಕುಗಳು ಸೇರಿ ವಿಶ್ವದಾದ್ಯಂತದ ಹಲವು ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಸ್ಪೈಸ್ ಜೆಟ್, ಅಕಾಸಾ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರಿದಂತೆ ಭಾರತೀಯ ವಿಮಾನಯಾನ ಸಂಸ್ಥೆಗಳೂ ತೊಂದರೆಗೆ ಒಳಗಾಗಿವೆ. ಇದು ವಿಮಾನ ರದ್ದತಿ ಮತ್ತು ವಿಳಂಬಕ್ಕೆ ಕಾರಣವಾಗಿದೆ.
ಬೆಳಗ್ಗೆ ಕಂಪ್ಯೂಟರ್, ಲ್ಯಾಪ್‌ಟಾಪ್ ರಿಸ್ಟಾರ್ಟ್ ಆಗಿದ್ದು, ಬಳಿಕ ಬ್ಲೂ ಸ್ಕ್ರೀನ್ ತೆರೆದುಕೊಂಡು ತಾಂತ್ರಿಕ ಸಮಸ್ಯೆ ತೋರುತ್ತಿದೆ. ಆಪರೇಟಿಂಗ್ ಸಿಸ್ಟಮ್ ಸಮಸ್ಯೆಯಲ್ಲಿ ಸಿಲುಕಿದೆ ಎಂಬ ಸಂದೇಶ ನೀಲಿ ಬಣ್ಣದ ಸಂದೇಶ ಡಿಸ್‌ಪ್ಲೇಯಲ್ಲಿ ಮೂಡಿರುವುದಾಗಿ ಅನೇಕ ಬಳಕೆದಾರರು ತಿಳಿಸಿದ್ದಾರೆ. ಈ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಮೈಕ್ರೋಸಾಫ್ಟ್ ಮತ್ತು ಸಿಇಒ ಸತ್ಯ ನಾದೆಲ್ಲಾ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇಡೀ ಜಗತ್ತಿನಾದ್ಯಂತ ಸಮಸ್ಯೆಯ ಬಗ್ಗೆ ಚರ್ಚೆ ಶುರುವಾಗುತ್ತಿದ್ದಂತೆ ಮೈಕ್ರೊಸಾಫ್ಟ್ ಕಂಪನಿ ಸ್ಪಷ್ಟನೆ ನೀಡಿದೆ. 'ಕ್ರೌಡ್‌ಸ್ಟ್ರೈಕ್ ಅಪ್‌ಡೇಟ್ ಪರಿಣಾಮವಾಗಿ ಈ ಸಮಸ್ಯೆ ಕಂಡು ಬಂದಿದೆ. ಆತಂಕಗೊಳ್ಳಬೇಡಿ, ಇದು ಶೀಘ್ರ ಸರಿಯಾಗಲಿದೆ ಎಂದು ಹೇಳಿದೆ. ಇನ್ನು ಮೈಕ್ರೋಸಾಪ್ಟ್ ನ ಈ ಸಮಸ್ಯೆಯ ಬಗ್ಗೆ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ವ್ಯಂಗ್ಯವಾಡಿದ್ದಾರೆ. ಇದು ಮೈಕ್ರೋ ಸಾಫ್ಟ್ ಅಲ್ಲ.. ಹಾರ್ಡ್ ಎಂದು ಟ್ವೀಟ್ ಮಾಡಿದ್ದಾರೆ. 2021ರಲ್ಲಿ ತಾವು ಮಾಡಿದ್ದ ಟ್ವೀಟ್ ಅನ್ನೇ ಈಗ ರಿಟ್ವೀಟ್ ಮಾಡಿ ಮೈಕ್ರೋಸಾಫ್ಟ್ ಸಂಸ್ಥೆ ಕಾಲೆಳೆದಿದ್ದಾರೆ.

Social Icons