ಮಂಗಳೂರು: ದೇವಾಲಯದ
ಒಳಾಂಗಣಕ್ಕೆ ಬೈಕ್ ತಂದು ವ್ಯಕ್ತಿಯೋರ್ವ ದಾಂಧಲೆ ಮಾಡಿದ ಘಟನೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ
ದೇವಾಲಯದಲ್ಲಿ ನಡೆದಿದೆ. ಮೂಲತಃ ಉಳ್ಳಾಲದ ನಿವಾಸಿ.
ಮಂಗಳೂರಿನ ಖಾಸಗಿ ಆಸ್ಪತ್ರೆ
ಸೆಕ್ಯೂರಿಟಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಸುಧಾಕರ ಆಚಾರ್ಯ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಇಂದು ಬೆಳಗ್ಗೆ ಸುಮಾರು 7 ಗಂಟೆ ಆಸುಪಾಸಿನಲ್ಲಿ ಈ ಘಟನೆ ನಡೆದಿದ್ದು, ಬೈಕ್ ಚಲಾಯಿಸಿಕೊಂಡು ನೇರ ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದ ಯುವಕ, ಬಳಿಕ ದೇವಸ್ಥಾನದ ಒಳಗೆ ಪ್ರವೇಶ ಮಾಡಿ ರಂಪಾಟ ಮಾಡಿದ್ದಾನೆ. ಅಲ್ಲದೆ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಹೋಗಿ ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ, ಈ ವೇಳೆ ಪ್ರಶ್ನೆ ಮಾಡಿದ ಅರ್ಚಕರ ಮೇಲೂ ಹಲ್ಲೆಗೆ ಯತ್ನಿಸಿ ಹುಚ್ಚಾಟ ನಡೆಸಿದ್ದಾನೆ. ಅಲ್ಲದೆ ಬಳಿಕ ದೈವಸ್ಥಾನದ ಅಣ್ಣಪ್ಪ ಪಂಜುರ್ಲಿ ದೈವದ ಖಡ್ಸಲೆ (ಆಯುಧ)ವನ್ನು ಕೈಗೆತ್ತಿಕೊಂಡು ಹುಚ್ಚಾಟ ನಡೆಸಿದ್ದಾನೆಂದು ಹೇಳಲಾಗಿದೆ. ಈ ವೇಳೆ ಸ್ಥಳದಲ್ಲಿದ್ದವರು ಯುವಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕ ದೇವಸ್ಥಾನದೊಳಗೆ ದಾಂಧಲೆ ನಡೆಸುತ್ತಿರುವ ದೃಶ್ಯ ದೇವಸ್ಥಾನದಲ್ಲಿದ್ದ ಭಕ್ತರ ಮೊಬೈಲ್ ನಲ್ಲಿ
ಸೆರೆಯಾಗಿದೆ.
ಅಣ್ಣಪ್ಪನ ಕಡ್ತಲೆ
ಮುಟ್ಟಿದ ಹಿನ್ನೆಲೆ ಶುದ್ದೀಕರಣ ಮಾಡಲಾಗಿದೆ. ಈ ಹಿಂದೆಯ ಸುಧಾಕರ ಆಚಾರ್ಯ ಬೇರೆ ಎರಡು ಮೂರು
ದೇವಾಲಯಗಳಿಗೆ ನುಗ್ಗಿ ದಾಂಧಲೆ ನಡೆಸಿರುತ್ತಾನೆ. ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದ ಈತ
ದೇವಾಲಯದ ಆವರಣದೊಳಗೆ ಬೈಕ್ ತಂದ ವೇಳೆ ಭಕ್ತರಿಗೂ ಗಾಯಗಳಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ
ಮಾಹಿತಿ ನೀಡಿದೆ. ಸದ್ಯ ಘಟನೆ ಬಗ್ಗೆ ಕದ್ರಿ ಠಾಣೆಗೆ ದೇವಸ್ಥಾನದ ಮುಖ್ಯಾಧಿಕಾರಿ ದೂರು
ನೀಡಿದ್ದು, ಯುವಕನ ವಶಕ್ಕೆ
ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Social Icons