ಬೆಂಗಳೂರು: ಇದು ಕರ್ನಾಟಕ ಮಾತ್ರವಲ್ಲ ದೇಶದ ಜನರಿಗೆ ಬೇಸರದ ಸಂಗತಿ. ಒಂದು ಕಾಲದಲ್ಲಿ ಟ್ವಿಟ್ಟರ್ಗೆ ಅಂದರೆ ಈಗಿನ ಎಕ್ಸ್ ಗೆ ಪ್ರಬಲ ಪ್ರತಿಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದ್ದ ಭಾರತೀಯ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಕೂ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ಎಂಬವರು ನಾಲ್ಕು ವರ್ಷದ ಹಿಂದೆ ಸ್ಥಾಪಿಸಿದ್ದ ಕೂ ಬಹಳ ವೇಗವಾಗಿ ಜನಪ್ರಿಯತೆ
ಪಡೆದುಕೊಂಡಿತ್ತು. ಆದರೆ ಈ ಸಾಮಾಜಿಕ ಜಾಲತಾಣ ವೇದಿಕೆಯನ್ನು ಈಗ ಮುಚ್ಚಲಾಗಿದೆ. ಕೂವಿನ ದೈನಂದಿನ
ಸಕ್ರಿಯ ಬಳಕೆದಾರರ ಸಂಖ್ಯೆ 21 ಲಕ್ಷ ತಲುಪಿದ ಸಮಯವಿತ್ತು. ಅಷ್ಟೇ ಅಲ್ಲ, ಕಂಪನಿಯ ಮಾಸಿಕ
ಸಕ್ರಿಯ ಬಳಕೆದಾರರ ಸಂಖ್ಯೆ 1 ಕೋಟಿ ತಲುಪಿತ್ತು. ಈ ವೇದಿಕೆಯಲ್ಲಿ 9 ಸಾವಿರ ವಿಐಪಿ ಜನರು
ಖಾತೆಗಳನ್ನು ಹೊಂದಿದ್ದರು. ಕಂಪನಿಯು ಏಪ್ರಿಲ್ 2023ರಿಂದಲೇ ಉದ್ಯೋಗಿಗಳನ್ನು
ಕಡಿಮೆ ಮಾಡಲು ಪ್ರಾರಂಭಿಸಿತ್ತು.
ಈ ಬಗ್ಗೆ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಮತ್ತು ಸಹ ಸಂಸ್ಥಾಪಕ
ಮಯಾಂಕ್ ಬಿಡವಟ್ಕ ಲಿಂಕ್ಡ್ಇನ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪಾಲುದಾರಿಕೆಯ ಮಾತುಕತೆಗಳ ವಿಫಲತೆ ಮತ್ತು ಹೆಚ್ಚಿನ
ತಂತ್ರಜ್ಞಾನದ ವೆಚ್ಚದಿಂದಾಗಿ ಈ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಮುಚ್ಚಲಾಗಿದೆ. ಸಾಮಾಜಿಕ
ಮಾಧ್ಯಮ, AI, ಬಾಹ್ಯಾಕಾಶ ಅಥವಾ EVಗಳಂತಹ
ಕ್ಷೇತ್ರಗಳಲ್ಲಿ ಭಾರತದಿಂದ ಮಹತ್ವಾಕಾಂಕ್ಷೆಯ, ವಿಶ್ವದರ್ಜೆಯ ಉತ್ಪನ್ನಗಳನ್ನು ನಿರ್ಮಿಸಲು ತಾಳ್ಮೆ, ದೀರ್ಘಾವಧಿಯ
ಬಂಡವಾಳದ ಅಗತ್ಯವಿದೆ. ಜಾಗತಿಕ ದೈತ್ಯರೊಂದಿಗೆ ಸ್ಪರ್ಧಿಸುವಾಗ, ಈ ಉದ್ಯಮಗಳು ತಮ್ಮ
ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಕಾರ್ಯತಂತ್ರದ ವಿಧಾನದ ಏರಿಳಿತದ
ಮೇಲೆ ಅವಲಂಬಿತರಾಗಿರುವುದಿಲ್ಲ.ಕೂ ನಂತಹ ಯೋಜನೆಗಳು ದೀರ್ಘಾವಧಿಯ ಹೂಡಿಕೆಗಳಾಗಿದ್ದು, ತ್ವರಿತ ಲಾಭವನ್ನು
ನಿರೀಕ್ಷಿಸಬಾರದು ಎಂದು ರಾಧಾಕೃಷ್ಣ ತಿಳಿಸಿದ್ದಾರೆ.
ಇದರ ಜತೆಗೆ ಕಂಪನಿಯ ಕೆಲವು ಆಸ್ತಿಗಳನ್ನು ಮಾರಾಟ ಮಾಡುವ ಇಚ್ಛೆಯನ್ನು
ಸಹ ಸಂಸ್ಥಾಪಕರು ವ್ಯಕ್ತಪಡಿಸಿದ್ದಾರೆ. ಅವರು ಬರೆದಿರುವ ಸುದೀರ್ಘ ಸಂದೇಶದಲ್ಲಿ, ಭಾರತೀಯ ಸಾಮಾಜಿಕ
ಮಾಧ್ಯಮದಲ್ಲಿ ಏನನ್ನಾದರೂ ಮಾಡಲು ಯೋಚಿಸುತ್ತಿರುವ ಜನರೊಂದಿಗೆ ಈ ಆಸ್ತಿಗಳನ್ನು ಹಂಚಿಕೊಳ್ಳಲು
ನಾವು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಕೂ ಆಪ್ ಸ್ಥಗಿತಗೊಳ್ಳುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆ
ಸ್ಟಾರ್ಟಪ್ ಇಂಡಿಯಾ ಪರಿಕಲ್ಪನೆಗೆ ಎದುರಾದ ಹಿನ್ನೆಡೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
Social Icons