IT ಉದ್ಯೋಗಿಗಳಿಗೆ ಕಾದಿದೆಯೇ ಶಾಕ್?! ಕರ್ನಾಟಕದಲ್ಲಿ ದಿನಕ್ಕೆ 14 ಗಂಟೆಗೆ ವಿಸ್ತರಣೆಯಾಗುತ್ತಾ ಕೆಲಸದ ಅವಧಿ?|

ಬೆಂಗಳೂರು: ರಾಜ್ಯದಲ್ಲಿರುವ ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಆಘಾತಕಾರಿ ಸುದ್ದಿಯೊಂದು ಎದುರಾಗುವಂತೆ ಕಾಣುತ್ತಿದೆ. ಉದ್ಯೋಗಿಗಳ ಕೆಲಸದ ಅವಧಿಯನ್ನು 14 ಗಂಟೆಗಳಿಗೆ ವಿಸ್ತರಣೆ ಮಾಡುವಂತೆ ಕೋರಿ ಕರ್ನಾಟಕದಲ್ಲಿನ ಐಟಿ ಕಂಪೆನಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ. ಈ ನಡೆ ಸಾಫ್ಟ್‌ವೇರ್ ತಂತ್ರಜ್ಞಾನ ವಲಯದಲ್ಲಿ ಸಂಚಲನ ಮೂಡಿಸಿದ್ದು, ಟೆಕ್ಕಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.



ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ತಿದ್ದುಪಡಿಯಲ್ಲಿ ತಮ್ಮ ಬೇಡಿಕೆಯಾದ ಕೆಲಸದ ಅವಧಿ ವಿಸ್ತರಣೆಯನ್ನು ಸೇರಿಸಬೇಕು ಎಂದು ಐಟಿ ಕಂಪೆನಿಗಳು ಮನವಿ ಮಾಡಿವೆ.

ಪ್ರಸ್ತುತದ ಕಾರ್ಮಿಕ ಕಾನೂನಿನ ಪ್ರಕಾರ, ಪ್ರತಿ ನಿತ್ಯ 9 ಗಂಟೆ ಕೆಲಸದ ಅವಧಿಗೆ ಅವಕಾಶ ನೀಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ ಒಂದು ಗಂಟೆ ಅಧಿಕ ಸಮಯ (ಓವರ್‌ಟೈಮ್) ಕೆಲಸಕ್ಕೆ ಅವಕಾಶವಿದೆ. ಆದರೆ ಐಟಿ ಕಂಪೆನಿಗಳ ಪ್ರಸ್ತಾವನೆ ಪ್ರಕಾರ, ನಿಗದಿತ ಕೆಲಸದ ವೇಳೆಯನ್ನು 12 ಗಂಟೆಗೆ ಹಾಗೂ 2 ಗಂಟೆ ಹೆಚ್ಚುವರಿ ಕೆಲಸದ ಅವಧಿ ಸೇರಿ ಒಟ್ಟು 14 ಗಂಟೆಗೆ ಈ ಮಿತಿಯನ್ನು ವಿಸ್ತರಣೆ ಮಾಡಬೇಕಾಗುತ್ತದೆ. ಐಟಿ ವಲಯವು ಸಲ್ಲಿಸಿರುವ ಹೊಸ ಪ್ರಸ್ತಾವನೆಯಲ್ಲಿ, ಐಟಿ/ ಐಟೆಸ್/ ಬಿಪಿಒ ವಲಯದ ಉದ್ಯೋಗಿಗಳು, ಮೂರು ಸತತ ತಿಂಗಳಲ್ಲಿ 125 ಗಂಟೆಗಳನ್ನು ಮೀರದಂತೆ, ದಿನಕ್ಕೆ 12 ಗಂಟೆಗೂ ಹೆಚ್ಚು ಸಮಯ ಕೆಲಸ ಮಾಡುವ ಅಗತ್ಯ ಬರಬಹುದು ಅಥವಾ ಅದಕ್ಕೆ ಅವಕಾಶ ನೀಡುವಂತಾಗಬಹುದು ಎಂದು ಹೇಳಿದೆ. ಈ ಕುರಿತಾದ ಪ್ರಾಥಮಿಕ ಸಭೆಯನ್ನು ರಾಜ್ಯ ಸರ್ಕಾರ ಈಗಾಗಲೇ ನಡೆಸಿದೆ. ಮುಂದಿನ ನಿರ್ಧಾರವನ್ನು ಶೀಘ್ರವೇ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ. ಈ ಪ್ರಸ್ತಾವದ ಕುರಿತು ಸಂಪುಟದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಕೆಲಸದ ವೇಳೆಯನ್ನು ವಿಸ್ತರಣೆ ಮಾಡುವ ಪ್ರಸ್ತಾವಕ್ಕೆ ಕರ್ನಾಟಕ ರಾಜ್ಯ ಐಟಿ/ ಐಟೆಸ್ ಉದ್ಯೋಗಿಗಳ ಒಕ್ಕೂಟದಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಕೆಲಸದ ಪಾಳಿಯ ಸಂಖ್ಯೆಯಲ್ಲಿ ಕಡಿತ ಮಾಡಿದರೆ ಮೂರನೇ ಒಂದರಷ್ಟು ನೌಕರರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅದು ಹೇಳಿಕೆ ಬಿಡುಗಡೆ ಮಾಡಿದೆ. ಈ ತಿದ್ದುಪಡಿಯು ಪ್ರಸ್ತುತ ಇರುವ ಮೂರು ಶಿಫ್ಟ್ ವ್ಯವಸ್ಥೆಯ ಬದಲು ಎರಡು ಪಾಳಿ ವ್ಯವಸ್ಥೆ ಜಾರಿಗೊಳಿಸಲು ಕಂಪೆನಿಗಳಿಗೆ ಅವಕಾಶ ನೀಡಲಿದೆ. ಇದರಿಂದ ಅವರ ಉದ್ಯೋಗದಲ್ಲಿನ ಮೂರನೇ ಎರಡರಷ್ಟು ಮಂದಿಯನ್ನು ಅವರು ಕೆಲಸದಿಂದ ಕಿತ್ತುಹಾಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದೆ.

ಸರ್ಕಾರವು ಉದ್ಯೋಗಿಗಳನ್ನು ಮನುಷ್ಯರ ಬದಲು ಯಂತ್ರಗಳ ರೀತಿ ನೋಡುತ್ತಿರುವಂತೆ ಕಾಣಿಸುತ್ತಿದೆ ಎಂದು ಆರೋಪಿಸಿರುವ ಒಕ್ಕೂಟ, ಐಟಿ ಸಂಸ್ಥೆಗಳ ಬೇಡಿಕೆಯನ್ನು ಜಾರಿಗೊಳಿಸದಂತೆ ಹಾಗೂ ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಬದುಕಲು ಖಾಸಗಿ ಹಾಗೂ ಸಾಮಾಜಿಕ ಜೀವನದ ಅವಶ್ಯಕತೆಯೂ ಇರುವ ನೌಕರರನ್ನು ಮನುಷ್ಯರು ಎಂದು ಪರಿಗಣಿಸಲು ಕರ್ನಾಟಕ ಸರ್ಕಾರವು ಸಿದ್ಧವಿಲ್ಲ ಎಂಬುದನ್ನು ತಿದ್ದುಪಡಿ ತೋರಿಸುತ್ತದೆ. ಇದರ ಬದಲಾಗಿ ಅದು, ಅವರನ್ನು ಕಾರ್ಪೊರೇಟ್‌ಗಳ ಲಾಭವನ್ನು ಹೆಚ್ಚಿಸುವ ಯಂತ್ರಗಳು ಎಂದಷ್ಟೇ ಪರಿಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈಗಾಗಲೇ ಮೀಸಲಾತಿ ವಿಚಾರದಲ್ಲಿ ಸರಕಾರದ ನಡೆ ಏನು ಎನ್ನುವ ಬಗ್ಗೆ ವ್ಯಾಪಕ ಕುತೂಹಲ ಗರಿಗೆದರಿದೆ. ಅದರ ಬೆನ್ನಲ್ಲೇ ಈ ಪ್ರಸ್ತಾವನೆ ಸರಕಾರಕ್ಕೆ ಬಂದಿದ್ದು, ಸರಕಾರದ ನಡೆ ಏನು ಎನ್ನುವ ಬಗ್ಗೆ ಕುತೂಹಲ ಮೂಡಿದೆ.