ನವದೆಹಲಿ: ಇಲ್ಲಿನ ಹಳೆ ರಾಜಿಂದರ್ ನಗರದಲ್ಲಿರುವ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಹಡಿಗೆ ಮಳೆ ನೀರು ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಉತ್ತರ ಪ್ರದೇಶ ರಾಜ್ಯದ ಅಂಬೇಡ್ಕರ್ ನಗರ ನಿವಾಸಿ ಶ್ರೇಯಾ ಯಾದವ್, ತೆಲಂಗಾಣ ನಿವಾಸಿ ತಾನ್ಯಾ ಸೋನಿ, ಮತ್ತು ಕೇರಳ ರಾಜ್ಯದ ಎರ್ನಾಕುಲಂ ನಿವಾಸಿ ನವೀನ್ ಡೆಲ್ವಿನ್ ನೀರು ತುಂಬಿದ ನೆಲಮಾಳಿಗೆಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರಾಜಿಂದರ್ ನಗರ ಠಾಣೆ ಪೊಲೀಸರು ಕೋಚಿಂಗ್ ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಕೋಚಿಂಗ್ ಸೆಂಟರ್ ಮಾಲಕ ಹಾಗು ಸಂಯೋಜಕನನ್ನು ಬಂಧಿಸಿದ್ದಾರೆ.
ನೆಲಮಾಳಿಗೆಯಲ್ಲಿ ನೀರು ತುಂಬುತ್ತಿರುವ ಬಗ್ಗೆ ಮಾಹಿತಿ ಪಡೆದ ತಕ್ಷಣ ರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ದೆಹಲಿ ಪೊಲೀಸ್, ದೆಹಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ನೆಲಮಾಳಿಗೆಯ ಸುಮಾರು 12 ಅಡಿಗಳಷ್ಟು ನೀರಿನಿಂದ ತುಂಬಿಕೊಂಡಿತ್ತು. ಮಳೆ ಮತ್ತು ಚರಂಡಿ ನೀರು ದಿಢೀರ್ ತುಂಬಿದ್ದರಿಂದ ಗ್ರಂಥಾಲಯದಲ್ಲಿ ಮೂವರು ವಿದ್ಯಾರ್ಥಿಗಳು ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಈ ಮೂವರು ವಿದ್ಯಾರ್ಥಿಗಳ ಮೃತದೇಹಗಳನ್ನು ಪತ್ತೆ ಹಚ್ಚಿದ್ದು, ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ.

Social Icons