ನವದೆಹಲಿ: ಭೂಮಿಯ ಮೇಲಿನ ವಾತಾವರಣ ಬದಲಾಗುತ್ತಿದೆ ಎನ್ನುವ ಮಾತುಗಳು ಬಹಳಷ್ಟು ಕೇಳಿಬರುತ್ತಿವೆ. ಪರಿಸರ ಉಳಿಸಬೇಕೆಂಬ ಆಗ್ರಹವೂ ಜೋರಾಗಿದೆ. ಹವಾಮಾನ ಬದಲಾವಣೆಯಿಂದ ಆಗುತ್ತಿರುವ ನೈಸರ್ಗಿಕ ವಿಪತ್ತುಗಳ ಬಗ್ಗೆ ಜಗತ್ತು ಆತಂಕಗೊಂಡಿರುವಾಗಲೇ ಈ ವಿದ್ಯಮಾನವು ಭೂಮಿಯ ಚಲನೆಯನ್ನು ಕೂಡ ಬದಲಾಯಿಸಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಇದು ಇಡೀ ಮನುಕುಲದ ಭವಿಷ್ಯದ ಬಗ್ಗೆ ಆತಂಕ ಹುಟ್ಟುಹಾಕಿದೆ.
ನೇಚರ್ ಜಿಯೋಸೈನ್ಸ್
ಮ್ಯಾಗಜೀನ್‌ನಲ್ಲಿ ಈ ಆಘಾತಕಾರಿ ಅಂಶಗಳು ಪ್ರಕಟವಾಗಿದೆ. ಸ್ವಿಜರ್‌ಲೆಂಡ್‌ನ
ಐಟಿಎಚ್ ಜೂರಿಚ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿರುವ ಅಧ್ಯಯನದಲ್ಲಿ ಈ ಸಂಗತಿಗಳು
ಬೆಳಕಿಗೆ ಬಂದಿವೆ ಎಂದು ಹೇಳಲಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಭೂಮಿಯ ದಕ್ಷಿಣ ಮತ್ತು
ಉತ್ತರ ಧ್ರುವದಲ್ಲಿರುವ ಹಿಮಗಡ್ಡೆಗಳು ಕರಗುತ್ತಿವೆ. ಅದರ ಪರಿಣಾಮ ಅಲ್ಲಿನ ನೀರು ಭೂಮಧ್ಯ
ರೇಖೆಯತ್ತ ಹರಿಯುತ್ತಿದೆ. ಇದು ಭೂಮಿಯ ಆಂತರಿಕ ಸಮತೋಲನವನ್ನು ತಪ್ಪಿಸಿದೆ. ಹೀಗಾಗಿ ಭೂಮಿಯ
ಸುತ್ತುವಿಕೆ ಕೊಂಚ ನಿಧಾನವಾಗಿದ್ದು, ಭೂಮಿಯು ತಿರುಗುವ
ಕಕ್ಷೆ ಕೂಡ ಬದಲಾವಣೆಯಾಗಿದೆ ಎಂಬ ಅಂಶ ವಿಜ್ಞಾನಿಗಳ ಸಂಶೋಧನೆಯಿಂದ ಕಂಡುಬಂದಿದೆ.
ಹವಾಮಾನ ಬದಲಾವಣೆಯು
ಭೂಮಿಯ ತಿರುಗುವಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಅದರಿಂದಾಗಿ ಭೂಮಿಯ ಚಲನೆ ಕೊಂಚ
ನಿಧಾನವಾಗಿದ್ದು, ಹಗಲಿನ ಸಮಯತುಸು
ದೀರ್ಘವಾಗಿದೆ. ಭೂಮಿಯು ಸುತ್ತುವ ಕಕ್ಷೆ ಕೂಡ ವ್ಯತ್ಯಾಸವಾಗಿದೆ. ಇದಕ್ಕೆ ಧ್ರುವ ಪ್ರದೇಶದಲ್ಲಿ
ಮಂಜುಗಡ್ಡೆಗಳು ಕರಗಿ ನೀರು ಭೂಮಧ್ಯ ರೇಖೆಯತ್ತ
ಹರಿಯುತ್ತಿರುವುದೇ ಕಾರಣ. ಹಸಿರುಮನೆ ಅನಿಲಗಳ ಬಿಡುಗಡೆಯನ್ನು
ನಿಯಂತ್ರಿಸದಿದ್ದರೆ ಈ ಬದಲಾವಣೆ ಇನ್ನಷ್ಟು ತೀವ್ರಗೊಳ್ಳಲಿದೆ ಎನ್ನುವ ಎಚ್ಚರಿಕೆಯನ್ನು
ಕೂಡ ವಿಜ್ಞಾನಿಗಳು ನೀಡಿದ್ದಾರೆ.
ಭೂಮಿಯ ತಿರುಗುವಿಕೆ
ಹಾಗೂ ಕಕ್ಷೆಗೆ ಸಾಂಪ್ರದಾಯಿಕವಾಗಿ ಚಂದ್ರನ ಪ್ರಭಾವ ಮುಖ್ಯ ಕಾರಣವಾಗಿದ್ದು, ಹವಾಮಾನ ಬದಲಾವಣೆಯು ಚಂದ್ರನ ಪ್ರಭಾವವನ್ನೂ ಮೀರಿಸಿ
ಭೂಮಿಯ ಚಲನೆಯ ಮೇಲೆ ದುಷ್ಪರಿಣಾಮ ಉಂಟು ಮಾಡುವ
ಸಾಧ್ಯತೆಯಿದೆ. ಈಗ ಉಂಟಾಗಿರುವ ಬದಲಾವಣೆಗಳು ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಅಷ್ಟೇನೂ ಪರಿಣಾಮ
ಬೀರುತ್ತಿಲ್ಲವಾದರೂ ಅಂತರಿಕ್ಷದಲ್ಲಿ ಭೂಮಿಯ ಚಲನೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುವ
ಸಾಧ್ಯತೆಯಿದೆ. ಭೂಮಿಯ ಚಲನೆಯಲ್ಲಿ ಅತ್ಯಂತ ಸಣ್ಣ ಬದಲಾವಣೆಯಾದರೂ ಭೂಮಿಯ ಮೇಲೆ ವಾಸಿಸುವವರಿಗೆ
ಅದರಿಂದ ಆಗಾಧ ದುಷ್ಪರಿಣಾಮಗಳು ಎದುರಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೀಗಾಗಿ ಭೂಮಿಯ ಮೇಲಿನ
ವಾತಾವರಣ, ಜಾಗತಿಕ ತಾಪಮಾನ ಏರಿಕೆಯಾಗದಂತೆ ಕಾಪಾಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ.
ಇಲ್ಲದಿದ್ದರೆ ನಮ್ಮ ಭವಿಷ್ಯಕ್ಕೆ ನಾವೇ ಕೊಡಲಿಯೇಟು ಕೊಟ್ಟುಕೊಂಡಂತಾಗುವುದರಲ್ಲಿ ಸಂಶಯವಿಲ್ಲ.

Social Icons