Girl Friend ಜೊತೆ ಜಗಳ - ಅರ್ಧ ದಾರಿಯಲ್ಲೇ ಬಸ್ಸಿಂದ ಇಳಿದು ಹೋದ ಡ್ರೈವರ್ - ಕಂಗಾಲಾದ ಉಡುಪಿ ಬಸ್ ಪ್ರಯಾಣಿಕರು

ಉಡುಪಿ: ಈ ಪ್ರೇಮಿಗಳ ಜಗಳವೇ ಹಾಗೆ. ಯಾವಾಗ ಹೇಗೆ ಎಲ್ಲಿ ಶುರುವಾಗುತ್ತದೆ, ಎಲ್ಲಿ ಕೊನೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇಂತಹ ಪ್ರೇಮಿಗಳ ನಡುವೆ ಸಿಲುಕಿ ಜನರು‌ ಪರದಾಡುವ ಅನೇಕ ಸಂದರ್ಭಗಳು ಎದುರಾಗುತ್ತದೆ. ಇಂತಹುದೇ ಒಂದು ಘಟನೆ ಉಡುಪಿಯಲ್ಲೂ ನಡೆದಿದೆ. ಖಾಸಗಿ ಬಸ್ ಚಾಲಕನೋರ್ವ ತನ್ನ ಪ್ರೇಯಸಿಯೊಂದಿಗೆ ಜಗಳವಾಡಿ ಬಸ್ಸನ್ನು ಅರ್ಧ ದಾರಿಯಲ್ಲಿಯೇ ನಿಲ್ಲಿಸಿ ಇಳಿದು ಹೋದ ವಿಲಕ್ಷಣ ಘಟನೆ ನಡೆದಿದೆ‌. 



ಈ ಘಟನೆ ನಡೆದಿರುವುದು ಜು.4ರಂದು. ಉಡುಪಿ ನಗರದಿಂದ ಸಂತೆಕಟ್ಟೆಗೆ ಖಾಸಗಿ ಬಸ್ಸೊಂದು ಪ್ರಯಾಣಿಕರನ್ನು ಹೊತ್ತುಕೊಂಡು ತೆರಳುತ್ತಿತ್ತು. ಈ ಬಸ್ ನ ಚಾಲಕನಿಗೆ ಪ್ರೇಯಸಿಯೋರ್ವಳಿದ್ದು, ಆಕೆ ನಿಟ್ಟೂರಿನಲ್ಲಿ ಬಸ್  ಹತ್ತಿದ್ದಾಳೆ. ಬಸ್ ಹತ್ತಿದ ಕೂಡಲೇ ಆಕೆ ಬಸ್ ಡ್ರೈವರ್ ಜೊತೆ ಜಗಳಕ್ಕಿಳಿದಿದ್ದಾಳೆ.

ಇಬ್ಬರ ಜಗಳದ ಮಧ್ಯೆಯೂ ಚಾಲಕ ಬಸ್ಸನ್ನು ಚಲಾಯಿಸುತ್ತಲೇ ಇದ್ದ. ವಾಗ್ವಾದ ಏರುತ್ತಲೇ ಇತ್ತು, ಬಸ್ ಚಲಿಸುತ್ತಲೇ ಇತ್ತು. ಈ ನಡುವೆ ಇವರ ಅವಾಂತರ ಕಂಡ ಕಂಡಕ್ಟರ್ ಮಧ್ಯೆ ಬಂದು ಇವರಿಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ವಿಫಲವಾಯಿತು. ಯಾವಾಗ ವಾಗ್ವಾದ ತೀವ್ರವಾಯಿತೋ ಆಗ ಚಾಲಕ ಏಕಾಏಕಿ ಬಸ್ಸನ್ನು ನಿಲ್ಲಿಸಿ ಬಸ್ಸಿನಿಂದ ಇಳಿದು ಹೊರಟು ಹೋಗಿದ್ದಾನೆ. ಯಾವಾಗ ಚಾಲಕ ಬಸ್ ಇಳಿದು ಹೋದನೋ ಆಗ ಚಾಲಕನ ಬೆನ್ನಲ್ಲೇ ಪೇಯಸಿಯೂ ಬಸ್ಸಿನಿಂದ ಇಳಿದು ಹೋಗಿದ್ದಾಳೆ.

ಇಬ್ಬರ ಜಗಳದಲ್ಲಿ ಬಸ್ ಅರ್ಧಕ್ಕೇ ನಿಂತಿದೆ. ಪ್ರಯಾಣಿಕರು ಮಾತ್ರ ಮುಖ ಮುಖ ನೊಡಿಕೊಂಡು ಇನ್ನೇನು‌ ಬಸ್ಸಿಂದ ಇಳಿಯಬೇಕೆನ್ನುವಷ್ಟರಲ್ಲಿ  ಕಂಡಕ್ಟರೇ ಚಾಲಕನ ಸೀಟ್ ಗೆ ತೆರಳಿ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಇದನ್ನು ನೋಡಿದ ಪ್ರಯಾಣಿಕರು ಇಬ್ಬರು ಪ್ರೇಮಿಗಳ ನಡುವೆ ನಾವು ಬಡವಾದೆವು ಎಂದು‌ ಗೊಣಗಿಕೊಂಡು ತಮ್ಮ ಸ್ಟಾಪ್ ನಲ್ಲಿ ಇಳಿದುಹೋಗಿದ್ದಾರೆ.