ನೀವು ಪರ್ಚೇಸ್ ಮಾಡಿದ Flatನಲ್ಲಿ ನೀರು ಸೋರಿದ್ರೂ, 5 ವರ್ಷ ಬಿಲ್ಡರ್‌ಗಳೇ ಹೊಣೆ!- ಮಹತ್ವದ ಆದೇಶ

ಬೆಂಗಳೂರು: ಇದು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲಿ ಫ್ಲ್ಯಾಟ್ ಪರ್ಚೇಸ್ ಮಾಡಿ, ಕಳಪೆ ಕಾಮಗಾರಿಯಿಂದಾಗಿ ಸಮಸ್ಯೆ ಅನುಭವಿಸುತ್ತಿರುವವರು ನೋಡಲೇಬೇಕಾದ ಸುದ್ದಿ. ಇನ್ಮುಂದೆ ಬಿಲ್ಡರ್‌ಗಳು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿದ ನಂತರ ತಮಗೂ ಕಟ್ಟಡಕ್ಕೂ ಯಾವುದೇ ಸಂಬಂಧವಿಲ್ಲವೆಂದು ನುಣುಚಿಕೊಳ್ಳುವಂತಿಲ್ಲ. ಯಾಕೆಂದರೆ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್‌ಗಳನ್ನು ಖರೀದಿದಾರರಿಗೆ ಹಸ್ತಾಂತರಿಸಿದ ನಂತರ ಐದು ವರ್ಷದೊಳಗೆ ಕಟ್ಟಡದಲ್ಲಿ ಬಿರುಕು ಮೂಡುವುದು, ನೀರು ಸೋರುವುದು ಮತ್ತಿತರರ ಯಾವುದೇ ಲೋಪದೋಷ ಕಂಡುಬಂದರೂ ಅದಕ್ಕೆ ಬಿಲ್ಡರ್‌ಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಇದು ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು ಹೊರಡಿಸಿರುವ ಮಹತ್ವದ ಆದೇಶ.


ಹೆಚ್ಚಿನ ಕಡೆಗಳಲ್ಲಿ ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳನ್ನು ಕಟ್ಟುವ
ಬಹುತೇಕ ಬಿಲ್ಡರ್‌ಗಳು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿದ ಬಳಿಕ ಅಪಾರ್ಟ್‌ಮೆಂಟ್‌ಗಳತ್ತ ಸುಳಿಯುವುದೇ ಇಲ್ಲ. ಕಟ್ಟಡದಲ್ಲಿ ಬಿರುಕು ಅಥವಾ ಇನ್ನಿತರೆ ಲೋಪದೋಷಗಳು ಕಂಡುಬಂದರೆ, ಅದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಇದ್ದುಬಿಡುತ್ತಾರೆ. ಇನ್ನು ಖರೀದಿ ಮಾಡುವವರು ಕೂಡ ಖರೀದಿಯ ವೇಳೆ ದಾಖಲೆ ಪತ್ರಗಳು, ನಿಬಂಧನೆಗಳನ್ನು ಸರಿಯಾಗಿ ಓದದೇ ಸಹಿ ಮಾಡಿ ಮತ್ತೆ ಪರದಾಟಪಡುತ್ತಾರೆ. ಅಂತಹವರಿಗೆ ಈ ಆದೇಶ ಎಚ್ಚರಿಕೆ ಗಂಟೆಯಾಗಿದೆ.

ಕೆರೇರಾ ನೀಡಿರುವ ಆದೇಶದ ಪ್ರಕಾರ ಫ್ಲ್ಯಾಟ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ ನಂತರ ಮುಂದಿನ ಐದು ವರ್ಷಗಳ ಕಾಲ ಕಟ್ಟಡದಲ್ಲಿಯಾವುದೇ ಸಮಸ್ಯೆ ಎದುರಾದರೂ ಬಿಲ್ಡರ್‌ಗಳು ಅದನ್ನು ಸರಿಪಡಿಸಬೇಕಾಗುತ್ತದೆ. ಸರ್ಜಾಪುರದ ತಿಂಡ್ಲುಗ್ರಾಮದ ಎಸ್‌ಎನ್‌ಆರ್‌ ವೆರಿಟಿ ಅಪಾರ್ಟ್‌ಮೆಂಟ್‌ನ ನಿವಾಸಿ ಪಂಕಜ್‌ಸಿಂಗ್‌ ದಾಖಲಿಸಿದ್ದ ದೂರು ಅರ್ಜಿಯ ವಿಚಾರಣೆ ನಡೆಸಿದ ಪ್ರಾಧಿಕಾರದ ಸದಸ್ಯ ಜಿ.ಆರ್‌.ರೆಡ್ಡಿ ಅವರಿದ್ದ ಪೀಠ ಈ ಆದೇಶ ನೀಡಿದೆ. ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ 2016ರ ಸೆಕ್ಷನ್‌ 31ರಡಿ ಸಲ್ಲಿಸಿದ್ದ ದೂರನ್ನು ಮಾನ್ಯ ಮಾಡಿರುವ ಪ್ರಾಧಿಕಾರ, ಪ್ರತಿವಾದಿ ಎಸ್‌ಎನ್‌ಆರ್‌ ಸ್ಕೆರ್‌ ಪ್ರೈವೇಟ್‌ ಲಿಮಿಟೆಡ್‌ಗೆ ಅರ್ಜಿದಾರರ ಫ್ಲ್ಯಾಟ್‌ನಲ್ಲಿ ನೀರು ಸೋರಿಕೆ ತಡೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದೆ. ಒಂದು ವೇಳೆ ಪ್ರತಿವಾದಿ ಬಿಲ್ಡರ್‌ ಆದೇಶ ಪಾಲಿಸದಿದ್ದರೆ ಅರ್ಜಿದಾರರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದೂ ಪ್ರಾಧಿಕಾರ ಹೇಳಿದೆ.