ನವದೆಹಲಿ: ಕುವೈತ್ ಸಿಟಿಯ ಅಪಾರ್ಟ್ಮೆಂಟೊಂದರಲ್ಲಿ ನಡೆದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ.
ಆಲಪ್ಪುಝ ಜಿಲ್ಲೆಯ ನೀರಾಟ್ಟುಪುರಂ ನಿವಾಸಿಗಳಾದ ಮ್ಯಾಕ್ಯೂಸ್ ಮುಲಕ್ಕಲ್ - ಲೀನ್ ಅಬ್ರಹಾಂ ದಂಪತಿ ಹಾಗೂ ಅವರ ಮಕ್ಕಳು ಮೃತಪಟ್ಟವರು.
ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಅಗ್ನಿ ಅವಘಡ ಸಂಭವಿಸಿ ಬೆಂಕಿ ಹತ್ತಿಕೊಂಡಿದ್ದು ಹೊಗೆಯಿಂದಾಗಿ ಎಲ್ಲರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮ್ಯಾಕ್ಯೂಸ್ ಮುಲಕ್ಕಲ್ ಕುವೈತ್ ಸಿಟಿಯಲ್ಲಿ ಕಳೆದ 15 ವರ್ಷಗಳಿಂದ ಉದ್ಯೋಗಿಯಾಗಿದ್ದಾರೆ. ಬೇಸಿಗೆಯ ರಜೆಯಲ್ಲಿ ಊರಿಗೆ ತೆರಳಿ ಜುಲೈ19ರಂದು ಸಂಜೆ 4 ಗಂಟೆಗೆ ಕುವೈತ್ ತಲುಪಿದ್ದರು. ಅದೇ ದಿನ ರಾತ್ರಿ ಅಪಾರ್ಟೆಂಟ್‌ನ 2ನೇ ಮಹಡಿಯಲ್ಲಿದ್ದಾಗಲೇ ಬೆಂಕಿ ಹತ್ತಿಕೊಂಡಿತ್ತು. ಪತ್ನಿ ಲೀನಿ ನರ್ಸ್ ಆಗಿದ್ದರೆ, ಇಬ್ಬರು ಮಕ್ಕಳು ಅಲ್ಲಿಯೇ ಶಾಲೆಗೆ ಹೋಗುತ್ತಿದ್ದರು.
ಭಾರತದ ರಾಯಭಾರ ಕಚೇರಿಯವರು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಇದೇ ಪರಿಸರದಲ್ಲಿ ಭಾರತೀಯರು ವಾಸವಿದ್ದ ಅಪಾರ್ಟೆಂಟಿಗೆ ಬೆಂಕಿ ಹತ್ತಿಕೊಂಡು 45 ಮಂದಿ ಸಾವಿಗೀಡಾಗಿದ್ದರು. ಈಗ ಅದೇ ಪರಿಸರದ ಮತ್ತೊಂದು ಕಟ್ಟಡದಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

Social Icons