ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ 2024-25ರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಉಳಿದ ರಾಜ್ಯಗಳಿಗೆ ಈ ಬಜೆಟ್‌ನಲ್ಲಿ ಯಾವ ಕೊಡುಗೆಯೂ ಇಲ್ಲ. ಯಾವ ಬಂಪರೂ ಇಲ್ಲ. ಈ ಮೂಲಕ ಕೇಂದ್ರ ಸರಕಾರವು ದೇಶದಲ್ಲಿ 28 ರಾಜ್ಯಗಳು, ಏಳು ಕೇಂದ್ರಾಡಳಿತ ಪ್ರದೇಶಗಳಿದೆ ಎಂಬುದನ್ನು ಮರೆತಂತಿದೆ. ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಿ ಬಜೆಟ್ ಮಂಡನೆ ಮಾಡಬೇಕಿತ್ತು. ಅದು ಬಿಟ್ಟು ಕೇವಲ ಒಂದೆರಡು ರಾಜ್ಯಗಳಿಗೆ ಮಾತ್ರ ಬೆಣ್ಣೆ ಉಳಿದವುಗಳಿಗೆ ಸುಣ್ಣ ಎಂಬಂತಾಗಿದೆ ನಿನ್ನೆ ಮಂಡಿಸಿರುವ ಬಜೆಟ್ ನೀತಿ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದಲೇ ಆಯ್ಕೆಯಾಗಿ ಕೇಂದ್ರಕ್ಕೆ ಹೋದವರು. ಆದರೆ ಅವರು ತಮ್ಮ ಬಜೆಟ್‌ನಲ್ಲಿ ಕರ್ನಾಟಕವನ್ನು ಕಡೆಗಣಿಸಿದ್ದಾರೆ. ಬಜೆಟ್ ಪೂರ್ವದಲ್ಲಿ ರಾಜ್ಯ ಸರಕಾರ ತಮ್ಮ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಬಜೆಟ್‌ನಲ್ಲಿ ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಈ ಬೇಡಿಕೆಗಳಿಗೆ ನಿರ್ಮಲಾ ಸೀತಾರಾಮನ್ ಅವರು ಸ್ಪಂದಿಸಲೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಸಚಿವ ಸಂಪುಟದಲ್ಲಿ ರಾಜ್ಯದ ಐವರು ಸಚಿವರಾಗಿ ಇದ್ದಾರೆ. ಆದರೆ ಅವರಿಂದಲೂ ರಾಜ್ಯಕ್ಕೇನು ಲಾಭವಾಗಿಲ್ಲ. ಬಡವರು, ಮಧ್ಯಮ ವರ್ಗದವರು, ರೈತರು, ಪರಿಶಿಷ್ಟ ವರ್ಗ - ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು ಎಲ್ಲರೂ ಈ ಬಜೆಟ್‌ನಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಕರ್ನಾಟಕದ ಹೆಸರನ್ನೇ ಎತ್ತಲಾಗಿಲ್ಲ. ರಾಜ್ಯದ ಹಿತವನ್ನು ಬಯಸಬೇಕಾದವರೇ ಸಂಪೂರ್ಣ ನಿರ್ಲಕ್ಷ್ಯ ಮಾಡಿ ರಾಜ್ಯದ ಜನತೆಯ ಕೈಗೆ ಚೊಂಬು ನೀಡಿದ್ದಾರೆ.
ಈ ಬಜೆಟ್ ಸಂಪೂರ್ಣ ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯವನ್ನು ತೃಪ್ತಿಪಡಿಸುವ ಬಜೆಟ್ ಆಗಿದೆ. ಈ ಎರಡು ರಾಜ್ಯಗಳ ವಿಕಾಸದ ಬಜೆಟೇ ಹೊರತು ದೇಶದ ವಿಕಾಸದ ಬಜೆಟ್ ಅಲ್ಲ. ಈ ಮೂಲಕ ಪ್ರಧಾನಿ ಮೋದಿಯವರು ತಮ್ಮ ಮಿತ್ರಪಕ್ಷಗಳ ಒಲವು ಗಳಿಸುವ ತಂತ್ರ ಹೆಣೆದಂತಿದೆ. ಜೊತೆಗೆ ತಮ್ಮ ಕುರ್ಚಿಯನ್ನು ಭದ್ರಪಡಿಸುವ ಉದ್ದೇಶವೂ ಇದರ ಹಿಂದೆ ಅಡಗಿದೆ ಎಂಬ ಸಂಶಯ ರಾಜ್ಯದ ಜನತೆಯನ್ನು ಕಾಡಲಾರಂಭಿಸಿದೆ. ಒಟ್ಟಿನಲ್ಲಿ ಕೇಂದ್ರದ ಬಜೆಟ್‌ನಲ್ಲಿ ಎಲ್ಲಾ ರಾಜ್ಯಗಳಿಗೆ ಸಮಾನ ಕೊಡುಗೆ ನೀಡಬೇಕಿತ್ತು. ಇದು ನೆರವೇರದಿದ್ದರಿಂದ ನಿನ್ನೆ ಮಂಡನೆಯಾದ ಕೇಂದ್ರದ ಬಜೆಟ್ ನಿರಾಶದಾಯಕ ಬಜೆಟ್ ಎಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.

Social Icons