ಜುಲೈ 16ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋದ ಶಿರೂರು ಗುಡ್ಡ ಕುಸಿತ ಇನ್ನೂ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ. ಗುಡ್ಡ ಕುಸಿತ, ಕಾಣೆಯಾದವರು, ರಕ್ಷಣಾ ಕಾರ್ಯ ಇವೆಲ್ಲವೂ ಈವರೆಗೂ ಗೋಜಲು ಗೋಜಲಾಗಿಯೇ ಇದೆ. ಗುಡ್ಡ ಕುಸಿದು ಒಂದು ವಾರ ಕಳೆದರೂ ಮಣ್ಣಿನಡಿ ಸಿಲುಕ್ಕಿದ್ದಾರೆ ಎಂದು ಹೇಳಲಾಗುತ್ತಿರುವವರ ಪತ್ತೆಯಾಗಲೀ, ಗುಡ್ಡ ಕುಸಿದು ಮಣ್ಣು ತುಂಬಿರುವ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತ ಮಾಡುವುದಾಗಲೀ ಇನ್ನೂ ನಡೆದಿಲ್ಲ.
ಹೆದ್ದಾರಿಗೆ ಮಣ್ಣು ಬಿದ್ದ ಪರಿಣಾಮ ಅಲ್ಲಿ ಸಣ್ಣ ಹೊಟೇಲ್ ನಡೆಸುತ್ತಿದ್ದ ಕುಟುಂಬವೊಂದರ ಸಮೇತ ಹಲವು ಮಂದಿ ಮಣ್ಣಿನಡಿ ಸಿಲುಕಿದ್ದು, ಹೆದ್ದಾರಿ ಪಕ್ಕದಲ್ಲೇ ಗಂಗಾವಳಿ ನದಿ ಹರಿಯುತ್ತಿರುವುದರಿಂದ ಕೆಲವರು ನೀರು ಪಾಲಾಗಿರುವ ಶಂಕೆಯೂ ಇದೆ. ಈವರೆಗೆ ಎಂಟು ಮೃತದೇಹಗಳು ಪತ್ತೆಯಾಗಿದ್ದು, ಮಣ್ಣುಪಾಲು ಅಥವಾ ನೀರು ಪಾಲಾದವರು ಎಷ್ಟು ಮಂದಿ, ಎಷ್ಟು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿದೆ ಎಂಬುದರ ಬಗ್ಗೆ ಇಲ್ಲಿನ ಜಿಲ್ಲಾಡಳಿತಕ್ಕಾಗಲೀ ರಾಜ್ಯ ಸರಕಾರಕ್ಕಾಗಲೀ ಸ್ಪಷ್ಟತೆ ಇಲ್ಲ. ಇಂತಹ ಗಂಭೀರ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದೇ ಈ ಗೊಂದಲ ಮುಂದುವರಿಯಲು ಕಾರಣ.
ಆದರೆ ಯಾವಾಗ ಮಣ್ಣಿನಡಿ ಸಿಲುಕಿರುವವರ ಪೈಕಿ ಕೇರಳದ ಕೋಝಿಕೋಡ್‌ನ ಅರ್ಜುನ್ ಎಂಬ ಟ್ರಕ್ ಚಾಲಕ ಟ್ರಕ್ ಸಮೇತ ಸಿಲುಕಿದ್ದಾನೆಂದು ತಿಳಿಯಿತೋ ಅಂದಿನಿಂದಲೇ ಕೇರಳ ಸರಕಾರ, ಮಾಧ್ಯಮ ಈ ವಿಚಾರವನ್ನು ಮುನ್ನಲೆಗೆ ತಂದಿತು. ಅಷ್ಟರ ತನ ಕೇವಲ ಎರಡೋ-ಮೂರೋ ಜೆಸಿಬಿಗಳನ್ನು ಬಳಸಿ ಮಣ್ಣು ತೆರವು ಮಾಡುತ್ತಿದ್ದ ಸರಕಾರಕ್ಕೆ ಕೇರಳದ ಮಧ್ಯ ಪ್ರವೇಶ ಬಿಸಿ ಮುಟ್ಟಿಸಿತು. ಸರಕಾರ ಒಂದಷ್ಟು ಚುರುಕುಗೊಂಡಿತು. ರಕ್ಷಣಾ ಕಾರ್ಯದ ವೇಗ ಹೆಚ್ಚಿತು. ಆದರೆ ಆಗಲೇ ಕಾಲ ಮಿಂಚಿತ್ತು. ಕೇರಳ ಸರಕಾರ ಮತ್ತಷ್ಟು ಒತ್ತಡ ಹಾಕ ತೊಡಗಿತ್ತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸ್ಥಳದಲ್ಲೇ ಬೀಡು ಬಿಟ್ಟರು. ಪರಿಣಾಮ ಹೆಚ್ಚುವರಿಯಾಗಿ ಕೇಂದ್ರದಿಂದ ಸೇನಾ ಪಡೆಯನ್ನು ತರಿಸಲಾಯಿತು. ಅದಕ್ಕೂ ಮೊದಲು ಕೇರಳದ ನಾಗರಿಕ ರಕ್ಷಣಾ ಪಡೆಯೊಂದು ನೆರವಿಗಾಗಿ ಧಾವಿಸಿತ್ತು. ಆದರೆ ಸುರಕ್ಷೆಯ ನೆಪವೊಡ್ಡಿ ಅವರನ್ನು ಹಿಂದಕ್ಕೆ ಕಳುಹಿಸಲಾಯಿತು. ಈ ಎಲ್ಲಾ ವಿಚಾರಗಳು, ಕಾರ್ಯಾಚರಣೆ ವಿಳಂಬ ಮೊದಲಾದವುಗಳು ಸರಕಾರದ ವಿರುದ್ಧ ಆಕ್ರೋಶಕ್ಕೂ ಕಾರಣವಾಯಿತು. ಇದಕ್ಕೆಲ್ಲಾ ನಿರಂತರ ಮಳೆ, ಪ್ರತಿಕೂಲ ಪರಿಸ್ಥಿತಿಯನ್ನೇ ಕಾರಣ ನೀಡಿ ಸರಕಾರ ಸಮಜಾಯಿಷಿ ನೀಡಿತು.
ತನ್ನ ನಿರ್ಲಕ್ಷ್ಯದಿಂದಾಗಿ ರಾಜ್ಯಸರಕಾರ ಅಂತರ್‌ರಾಜ್ಯ ಮಟ್ಟದಲ್ಲಿ ಸುದ್ದಿಯಾಯಿತು.
ಈ ನಡುವೆ ಈ ಪ್ರಕರಣವನ್ನು ಮಾಧ್ಯಮಗಳೂ ಹೆಚ್ಚಿನ ಪ್ರಾಮುಖ್ಯತೆಯೊಂದಿಗೆ ಸುದ್ದಿ ಮಾಡಿಲ್ಲ. ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆಯ ಕುರಿತಾಗಿ ಅದೆಷ್ಟೋ ನೇರ ಪ್ರಸಾರಗಳನ್ನು ಮಾಡಿರುವ ಕನ್ನಡದ ಟಿವಿ ವಾಹಿನಿಗಳು ಈ ಗುಡ್ಡ ಕುಸಿತಕ್ಕೆ ಆ ಮಟ್ಟಿನ ಪ್ರಾಮುಖ್ಯತೆ ನೀಡಿಲ್ಲ. ಆದರೆ ತಮ್ಮ ರಾಜ್ಯದ ಒಬ್ಬನೇ ಒಬ್ಬ ಮಣ್ಣಿನಡಿ ಸಿಲುಕಿದ್ದಾನೆಂಬ ಕಾರಣಕ್ಕೆ ಕೇರಳದ ಮಾಧ್ಯಮಗಳು ಅಂಕೋಲಕ್ಕೆ ಓಡೋಡಿ ಬಂದವು. ಒಂದು ವಾಹಿನಿಯ ಪ್ರಮುಖ ಹುದ್ದೆಯಲ್ಲಿರುವವರೇ ಅಂಕೋಲದಲ್ಲಿ ಫೀಲ್ಡ್‌ಗೆ ಇಳಿದು ಅಲ್ಲಿನ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಇವೆಲ್ಲಾ ವಿಚಾರವಾಗಿ ಸುದ್ದಿ ಮತ್ತಷ್ಟು ಪ್ರಾಮುಖ್ಯತೆ ಪಡೆಯಿತು.
ಆದರೆ ಮಣ್ಣಿನಡಿ ಸಿಲುಕಿದ ನಮ್ಮ ಕರ್ನಾಟಕದ ಹತ್ತಕ್ಕೂ ಹೆಚ್ಚು ಮಂದಿಗೆ ಮಿಡಿಯುವವರೇ ಇಲ್ಲವಾದರು.
ಇತ್ತೀಚಿಗೆ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಹಿತ ಭೇಟಿ ನೀಡಿದರು. ಮೃತರ ಕುಟುಂಬಕ್ಕೆ ಐದು ಲಕ್ಷ ರೂ.ವರೆಗಿನ ಪರಿಹಾರವನ್ನು ಘೋಷಿಸಲಾಯಿತು. ಆದರೆ ಅವೆಲ್ಲವೂ ಸರಕಾರದ ಮೇಲಿನ ಕಳಂಕವನ್ನು ನೀಗಿಸಿತೇ?
ಸರಕಾರವೇನೋ ಒತ್ತಟ್ಟಿಗಿರಲಿ. ವಿರೋಧಪಕ್ಷಗಳೂ ಈ ಘಟನೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಬಗ್ಗೆ ಸರಕಾರಕ್ಕೆ ಒತ್ತಡ ಹಾಕುವುದಾಗಲೀ ಸದನದಲ್ಲಿ ಪ್ರಸ್ತಾಪಿಸುವುದಾಗಲೀ ಮಾಡಿಲ್ಲ. ಒಟ್ಟಾರೆ ಇಡೀ ಪ್ರಕರಣ ಯಾಕೆ ಪ್ರಾಮುಖ್ಯತೆ ಕಳೆದು ಕೊಂಡಿತು ಎಂದೇ ಅರ್ಥವಾಗುತ್ತಿಲ್ಲ.

Social Icons