ಕಳೆದೊಂದು ವಾರದಿಂದ ಮಳೆಯ ಆರ್ಭಟದ ಸುದ್ದಿಯನ್ನೇ ಕೇಳುತ್ತಿದ್ದೇವೆ. ಎಡೆಬಿಡದೆ ಸುರಿದ ಕುಂಭದ್ರೋಣ ಮಳೆ ಉಂಟುಮಾಡಿದ ಅನಾಹುತಗಳು ಅಷ್ಟಿಷ್ಟಲ್ಲ. ಅದರಲ್ಲೂ ಮುಖ್ಯವಾಗಿ ಪ್ರಾಕೃತಿಕ ವಿಕೋಪಗಳನ್ನು ಕಂಡು ಎಲ್ಲರೂ ತತ್ತರಿಸಿದ್ದಾರೆ. ಈ ನಡುವೆ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಭಾರೀ ಪ್ರಮಾಣದ ಗುಡ್ಡ ಕುಸಿತ ಪ್ರಕರಣ. ಘಟನೆ ನಡೆದು ಏಳೆಂಟು ದಿನಗಳು ಕಳೆದರೂ ದುರಂತದ ಸಂಪೂರ್ಣ ಚಿತ್ರಣ ಸಿಕ್ಕಿಲ್ಲ. ಮಡಿದವರೆಷ್ಟು ಎನ್ನುವ ಖಚಿತ ಲೆಕ್ಕಾಚಾರವೂ ಇಲ್ಲ. ಎಲ್ಲವೂ ಊಹಾಪೋಹದ ಮೇಲೆ ನಡೆಯುತ್ತಿದೆ. ನಾಪತ್ತೆಯಾದವರು ಬದುಕಿ ಬರಲಿ ಎನ್ನುವ ಹಾರೈಕೆಗಳು ಎಲ್ಲೆಡೆಯಿಂದ ವ್ಯಕ್ತವಾಗುತ್ತಿವೆ.
ಈ ದುರಂತದ ಜೊತೆ ಜೊತೆಗೆ ಘಾಟ್ ಪ್ರದೇಶಗಳಲ್ಲಿ ಎದುರಾಗಿದ್ದ ಭೂ ಕುಸಿತಗಳು ಕೂಡ ಕರಾವಳಿಯು ದ್ವೀಪವಾಗಿ ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಆದರೆ ಅದೃಷ್ಟವಶಾತ್ ಸದ್ಯಕ್ಕೆ ಆ ಆತಂಕ ತಪ್ಪಿದೆ. ಕಡಲ ನಗರಿ ಮಂಗಳೂರು ಮತ್ತು ರಾಜಧಾನಿ ಬೆಂಗಳೂರಿನ ನಡುವೆ ಇರುವ ಸಂಪರ್ಕ ಅದೆಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ಅರಿವಿರುವ ವಿಚಾರ. ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಗೆ ಶಿರಾಡಿ ಘಾಟ್ ನಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ಹೀಗಾಗಿ ಘಾಟ್ ಮೂಲಕ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅತ್ತ ಕಡೆ ಹಿಂಧೆ ಭಾರೀ ಪ್ರಾಕೃತಿಕ ದುರಂತ ಕಂಡಿರುವ ಕೊಡಗು ಜಿಲ್ಲೆಯಲ್ಲೂ ಗುಡ್ಡ ಕುಸಿತ ಉಂಟಾಗಿ ಮಡಿಕೇರಿ ಮೂಲಕ ಬೆಂಗಳೂರು, ಮೈಸೂರು ಕಡೆಗೆ ಕೆಲದಿನ ರಸ್ತೆ ಸಂಚಾರವನ್ನು ರಾತ್ರಿ ವೇಳೆ ತಡೆಹಿಡಿಯಲಾಗಿತ್ತು. ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಸಾವಿರಾರು ಪ್ರಯಾಣಿಕರನ್ನು ಹೊತ್ತಿದ್ದ ಬಸ್ ಗಳು, ಕಾರುಗಳು ಹಲವು ಗಂಟೆಗಳ ಕಾಲ ಕಿಲೋಮೀಟರ್ ಗಟ್ಟಲೆ ನಿಂತಿದ್ದವು. ಲಾರಿ, ಟ್ರಕ್ ಚಾಲಕರು ಅನ್ನ, ಆಹಾರ ಇಲ್ಲದೆ ಪರಿತಪಿಸುತ್ತಿದ್ದರು. ಇನ್ನೊಂದು ಇದ್ದ ಏಕೈಕ ದಾರಿ ಚಾರ್ಮಾಡಿ ಘಾಟ್ ನಲ್ಲೂ ಭೂಕುಸಿತ ಸಂಭವಿಸಿದ್ದರೆ ಇಡೀ ಕರಾವಳಿ ಇತರ ಜಿಲ್ಲೆಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಆತಂಕವಿತ್ತು, ಮುಂದಕ್ಕೂ ಇದೆ.
ಹಾಗಿದ್ದಾಗ ಇದಕ್ಕೆಲ್ಲಾ ಕಾರಣ ವಿಪರೀತ ಮಳೆ ಎನ್ನುವ ಮಾತುಗಳನ್ನು ಎಲ್ಲರೂ ಹೇಳುತ್ತಾರೆ. ಆದರೆ
ನಿಜಕ್ಕೂ ಇದೇ ಕಾರಣವೇ ಎಂದರೆ ಖಂಡಿತಾ ಇಲ್ಲ. ಒಂದಷ್ಟು ವರ್ಷಗಳ ಹಿಂದಿನವರೆಗೂ ಇದಕ್ಕಿಂತಲೂ ದುಪ್ಪಟ್ಟು
ಮಳೆ ಬರುತ್ತಿತ್ತು. ಎಡೆಬಿಡದೆ ಮನೆಯಿಂದ ಹೊರಗೆ ಕಾಲಿಡದಂತೆ ಕಾಡುತ್ತಿತ್ತು. ಆದರೆ ಆಗೆಲ್ಲ ಇಂತಹ
ದುರಂತಗಳು ನಡೆಯುತ್ತಿರಲಿಲ್ಲ. ಹಾಗಿರುವಾಗ ಅಂದಿನ ಅರ್ಧದಷ್ಟೂ ಬಾರದ ಮಳೆಗೆ ಇಂತಹ ಸನ್ನಿವೇಶಗಳು
ಯಾಕೆ ನಿರ್ಮಾಣವಾಗುತ್ತಿದೆ ಎನ್ನುವುದಕ್ಕೆ ಉತ್ತರವೂ ನಾವೇ ಆಗಿದ್ದೇವೆ.
ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮಘಟ್ಟದ ಮೇಲೆ ನಿರಂತರ ದಾಳಿಯಾಗುತ್ತಿದೆ. ರಸ್ತೆಗಳ ನಿರ್ಮಾಣದ
ಹೆಸರಿನಲ್ಲಿ ಬೇಕಾಬಿಟ್ಟಿಯಾಗಿ ಯಾವುದೇ ಮುಂದಾಲೋಚನೆ ಇಲ್ಲದೆ, ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕತ್ತರಿಸುತ್ತಿದ್ದೇವೆ.
ಮಣ್ಣನ್ನು ಗಟ್ಟಿಯಾಗಿ ಹಿಡಿದಿಡುವ ಮರಗಳನ್ನು ಬೇರು ಸಮೇತ ಉರುಳಿಸುತ್ತಿದ್ದೇವೆ. ಇಷ್ಟೆಲ್ಲಾ ಆಗುವಾಗ
ಸುರಿಯುವ ನೀರು ಅದು ಹೇಗೆ ತಾನೇ ಭೂಮಿಯೊಳಗೆ ಇಂಗುತ್ತದೆ? ಹರಿಯುತ್ತಾ ಸಿಕ್ಕಿದ್ದೆಲ್ಲವನ್ನೂ ಕೊಚ್ಚಿಕೊಂಡು
ಉಗ್ರರೂಪ ತಾಳುತ್ತಾ ಹೋಗುತ್ತದೆ. ಜೊತೆಗೆ ಭಾರೀ ಪ್ರಮಾಣದ ಭೂಕುಸಿತಕ್ಕೂ ಕಾರಣವಾಗುತ್ತಿದೆ.
ಹೀಗಾಗಿ ಮುಂದಿನ ದಿನಗಳಲ್ಲಾದರೂ ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯ ಮೇಲಿನ ದಬ್ಬಾಳಿಕೆ ಕಡಿಮೆಯಾಗಲಿ.
ವೈಜ್ಞಾನಿಕವಾಗಿ, ಪಶ್ಚಿಮ ಘಟ್ಟಗಳ ಸೂಕ್ಷ್ಮತೆಗೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿ.
ಆ ಮೂಲಕ ಅಮಾಯಕ, ಬಡ ಜೀವಗಳ ಪ್ರಾಣಹಾನಿ ತಪ್ಪಲಿ ಎನ್ನುವುದು ಆಶಯ.
Social Icons